ಬೆಂಗಳೂರು: ಬೆಂಗಳೂರು ಮೊದಲು ಕೆರೆಗಳ ನಗರ ಎಂದೆ ಪ್ರಸಿದ್ಧಿ ಪಡೆದಿತ್ತು. ಆದರೆ ಕಾಲಕ್ರಮೇಣ ಮನುಜನ ಸ್ವಾರ್ಥಕ್ಕೆ ಕೆರೆಗಳು ಬಲಿಪಶುವಾಗಿದ್ದು ದುರದೃಷ್ಟಕರ.ಆದ್ರೆ ಇದೀಗ ಇರುವ ಕೆರೆಗಳು ಕೂಡ ಬೆಂಗಳೂರಿನ ತಾಪಮಾನದಿಂದ ಬತ್ತಿಹೋಗುತ್ತಿವೆ.. ಅದ್ಯಾವ ಕೆರೆ ಅಂತೀರಾ ಈ ಸ್ಟೋರಿ ನೋಡಿ. ಯೆಸ್.. ಕೆರೆಗಳು ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜೀವ ರಾಶಿಗಳಿಗೆ ಉತ್ತಮ ಆಶ್ರಯ ತಾಣವಾಗುತ್ತದೆ. ಪರಿಶುದ್ಧ ಹಾಗೂ ನಿರ್ಮಲ ಪರಿಸರಕ್ಕೆ ಸಹಾಕಾರಿಯಾಗಿದೆ. ಅಲ್ಲದೆ ಹಿತಕರ, ಆನಂದಮಯ ಅನುಭೂತಿಯನ್ನೂ ಒದಗಿಸುತ್ತದೆ. ಹಾಗೆ ಸಮಯವಿದ್ದರೆ, ಮನಸ್ಸು ಒತ್ತಡ ಹೊಂದಿದರೆ, ಬೇಸರ ಮೂಡಿದ್ದರೆ ಇಲ್ಲವೆ ಪುಟ್ಟ ಮಕ್ಕಳಿಗೆ ಸಂತಸದ ಕ್ಷಣಗಳನ್ನು ನೀಡಲು ಬಯಸಿದರೆ ಒಂದೊಮ್ಮೆ ಕೆರೆಗೆ ಭೇಟಿ ನೀಡಿ.
ಅಲ್ಲಿನ ಪ್ರಶಾಂತ ಪರಿಸರ, ನಿರ್ಮಲ ವಾತಾವರಣ ನಿಮಗೆ ಹೇಳಲಾರದಷ್ಟು ಆನಂದವನ್ನುಂಟು ಮಾಡುತ್ತದೆ. ಇನ್ನೂ ಕೆರೆಯ ಪಕ್ಕದಲ್ಲೆ ಚಿಕ್ಕದೊಂದು ಉದ್ಯಾನವಿದ್ದರೆ…ಅಬ್ಬಾ ಸಂತೋಷ ಇಮ್ಮಡಿಗೊಳ್ಳುತ್ತದೆ. ಆದ್ರೆ ಇದೀಗ ಅದೇ ಕೆರೆಗಳು ಕಾಣೆಯಾಗ್ತಿದೆ. ಬೆಂಗಳೂರಿನ ಸ್ಯಾಂಕಿ ಕೆರೆ ಕೂಡ ಮಳೆಯಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ…ಉದ್ಯಾನ ನಗರಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ದಶಕಗಳ ಇತಿಹಾಸ ಇರುವ ಕೆರೆಯೊಂದು ಬತ್ತುತ್ತಿರುವುದು ನಗರದಲ್ಲಿ ಹೆಚ್ಚುತ್ತಿರುವ ತಾಪಮಾನಕ್ಕೆ ಸಾಕ್ಷಿಯಾಗಿದೆ.
1874 ರಲ್ಲಿ ಬರಗಾಲದ ನೀರಿನ ಕೊರೆತೆಯನ್ನು ನೀಗಿಸಲು ಕರ್ನಲ್ ರಿಚರ್ಡ್ ಹಿರಾಮ್ ಸ್ಯಾಂಕಿ ಅವರು 1882 ರಲ್ಲಿ ಸ್ಯಾಂಕಿ ಟ್ಯಾಂಕ್ ಕೆರೆಯನ್ನು ನಿರ್ಮಿಸಿದ್ದರು.ದಶಕಗಳ ಕಾಲ ಬೆಂಗಳೂರು ಉತ್ತರ ಭಾಗದಲ್ಲಿನ ಜನರಿಗೆ ಕುಡಿಯುವ ನೀರಿಗೆ ಇದೇ ಕೆರೆ ಆಧಾರವಾಗಿತ್ತು. ಆದರೆ ದಿನಗಳು ಕಳೆದಂತೆ ಈ ಕೆರೆಯ ನೀರಿನ ಬಳಕೆಯನ್ನು ನಿಲ್ಲಿಸಲಾಗಿತ್ತು. ಈ ಭಾಗದಲ್ಲಿನ ಅಂತರ್ಜಲ ಮಟ್ಟ ಸ್ಥಿರತೆಗೆ ನೆರೆವಾಗಿದ್ದ ಸ್ಯಾಂಕಿ ಟ್ಯಾಂಕ್ ಕೆರೆ ಇದೀಗ ಬಹುತೇಕ ಒಣಗಿ ಹೋಗಿದೆ.
ನಗರದ ಐಐಎಸ್ಸಿ, ಸದಾಶಿವನಗರ ಹಾಗೂ ನೆರೆಯ ಪ್ರದೇಶಗಳಲ್ಲಿ ಬೀಳುವ ಮಳೆಯ ನೀರನೇ ಈ ಕೆರೆಗೆ ಆಶ್ರಯವಾಗಿದೆ. ಆದರೆ ಈ ಬಾರಿ ನಗರದಲ್ಲಿ ಅತ್ಯಲ್ಪ ಮಳೆ ಹಾಗೂ ಹೆಚ್ಚುತ್ತಿರುವ ತಾಪಮಾನದಿಂದಾಗಿ ಕೆರೆಯಲ್ಲಿನ ನೀರು ವೇಗವಾಗಿ ಆವಿಯಾಗುತ್ತಿದೆ. ಕೆರೆಯ ಸುತ್ತಮುತ್ತ ಇರುವ ಕಾಂಕ್ರೀಟ್ ಪ್ರದೇಶಗಳು ಹಾಗೂ ಬೋರ್ವೆಲ್ಗಳ ಮೂಲಕ ಅಂತರ್ಜಲವನ್ನು ಅತಿಯಾಗಿ ಬಳಸುತ್ತಿರುವುದು ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಲು ಮತ್ತೊಂದು ಕಾರಣ .
ಒಟ್ಟಾರೆ.. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನೂರಾರು ಮಂದಿ ಇಲ್ಲಿ ವಾಕಿಂಗ್ ಮಾಡುತ್ತಾರೆ. ನೀರು ಇರುವ ಕಾರಣ ವಾತಾವರಣ ಕೂಲ್ ಆಗಿರುತ್ತದೆ. ಆದರೆ ಐತಿಹಾಸಿಕ ಕೆರೆ ಬತ್ತುತ್ತಿರುವುದು ವಾಯು ವಿವಾರಿಗಳ ಬೇಸರಕ್ಕೆ ಕಾರಣವಾಗಿದೆ. ಅತಿಯಾದ ಕಾಂಕ್ರೀಟ್ ಬಳಕೆಯಿಂದಾಗಿ ಕೆರೆಗೆ ನೀರು ಹರಿವಿಗೆ ಅಡ್ಡಿಯಾಗಿದೆ. ಕೆರೆ ನಿರ್ವಹಣೆಗೆ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿಯ ಸದಸ್ಯರಾದ ಸುಂದರರಾಜನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಶಕಗಳ ಇತಿಹಾಸ ಇರುವ ಸ್ಯಾಂಕಿ ಟ್ಯಾಂಕ್ ಕೆರೆ ಬತ್ತುತ್ತಿರುವುದು ಬೇಸರದ ವಿಚಾರವಾಗಿದೆ.