ದೇಶದಿಂದ ಪರಾರಿಯಾಗಿ ವಿದೇಶದಲ್ಲಿರುವ ಇಬ್ಬರು ವಂಚಕರು ಒಂದೇ ಕಡೆ ಕಾಣಿಸಿಕೊಂಡಿದ್ದಾರೆ. ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹಾಗೂ ಸುಸ್ತೀದಾರ ವಿಜಯ್ ಮಲ್ಯ, ಇಬ್ಬರೂ ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಹಾಗೂ ಜಾಸ್ಮಿನ್ ಮದುವೆ ಬ್ರಿಟನ್ ನಲ್ಲಿ ನಡೆದಿದೆ. ಈ ಮದುವೆಯಲ್ಲಿ ವಿಜಯ್ ಮಲ್ಯ ಜೊತೆ ಲಲಿತ್ ಮೋದಿ ಕೂಡ ಕಾಣಿಸಿಕೊಂಡಿದ್ದಾರೆ.
ಹರ್ಟ್ಫೋರ್ಡ್ಶೈರ್ನಲ್ಲಿರುವ ವಿಜಯ್ ಮಲ್ಯ ಅವರ ಐಷಾರಾಮಿ ಎಸ್ಟೇಟ್ನಲ್ಲಿ ಸಿದ್ಧಾರ್ಥ ಮಲ್ಯ ಮತ್ತು ಜಾಸ್ಮಿನ್ ವಿವಾಹವಾದರು. ಈ ಜೋಡಿ ಈ ಹಿಂದೆ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದರು. ಈ ಬಳಿಕ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ.
ವಿಜಯ್ ಮಲ್ಯ 900 ಕೋಟಿಗೂ ಅಧಿಕ ಸಾಲವನ್ನು ಬ್ಯಾಂಕ್ ಗಳಿಗೆ ಪಾವತಿಸದೇ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿ ಭಾರತ ಬಿಟ್ಟು ಪರಾರಿಯಾಗಿದ್ದಾರೆ. ಮತ್ತೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಇತರ ಪ್ರಕರಣಗಳ ಆರೋಪ ಹೊತ್ತಿದ್ದು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಐಪಿಎಲ್ 2010 ರ ನಂತರ ಲಲಿತ್ ಮೋದಿ ಅವರನ್ನು ಬಿಸಿಸಿಐನಿಂದ ಅಮಾನತುಗೊಳಿಸಲಾಗಿತ್ತು.
ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಲಲಿತ್ ಮೋದಿ, ವಿಶ್ವ ಕ್ರೀಡಾ ಸಮೂಹದ (ಡಬ್ಲ್ಯುಎಸ್ಜಿ) ಅಧಿಕಾರಿಗಳೊಂದಿಗೆ ಶಾಮೀಲಾಗಿ 753 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.