ಲಂಡನ್: ‘ಮೋದಿ’ ಉಪನಾಮ ವಿವಾದ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, ಬ್ರಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ‘ಮೋದಿ ಉಪನಾಮ’ ಮತ್ತು ಮೋದಿ ಉಪನಾಮದವರು ಪಲಾಯನವಾದಿಗಳು ಎಂದು ಕರೆದಿದ್ದಕ್ಕಾಗಿ ಬ್ರಿಟಿಷ್ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು 59,000 ಕೋಟಿ ರೂಪಾಯಿ ಒಪ್ಪಂದದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ಈ ವೇಳೆ ‘ಮೋದಿ ಉಪನಾಮ’ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದು, ಗಾಂಧಿ ಎಲ್ಲ ಕಳ್ಳರಿಗೂ ಮೋದಿ ಎಂಬ ಒಂದೇ ಉಪನಾಮ ಇರುವುದು ಹೇಗೆ ಎಂದು ಪ್ರಶ್ನಿಸಿದ್ದರು.
ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಎರಡು ವರ್ಷಗಳ ಶಿಕ್ಷೆ ವಿಧಿಸಿದ್ದು ತದನಂತರ ಅವರನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇದೀಗ ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸುವುದಾಗಿ ಲಲಿತ್ ಮೋದಿ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.