ತಿರುವನಂತಪುರಂ: ಕೊಡಗಿನಲ್ಲಿ 2018ರಲ್ಲಿ ನಡೆದ ಜಲಸ್ಫೋಟದಂತೆ ಕೇರಳದಲ್ಲೂ ದುರಂತ ಸಂಭವಿಸಿದೆ. ಮಂಗಳವಾರ ಮುಂಜಾನೆ ವಯನಾಡ್ ಜಿಲ್ಲೆಯ ಮೆಪ್ಪಾಡಿಯಲ್ಲಿಗುಡ್ಡ ಕುಸಿದಿದೆ. ಈ ದುರಂತದಲ್ಲಿ 19 ಮಂದಿ ಸಾವನ್ನಪ್ಪಿ ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಪಣರಾಯಿ ವಿಜಯ್ ಅವರ ಬಳಿ ಮಾತನಾಡಿದ್ದು, ಕೇಂದ್ರದಿಂದ ಸಾಧ್ಯವಾಗುವ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ವಯನಾಡಿನ ಕೆಲವು ಭಾಗಗಳಲ್ಲಿ ಭೂಕುಸಿತದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ, ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ, ಗಾಯಗೊಂಡವರು ಬೇಗ ಗುಣಮುಖರಾಗಲಿ. ಭೂಕುಸಿತದ ಕುರಿತು ಪಿಣರಾಯಿ ವಿಜಯ್ ಅವರೊಂದಿಗೆ ಮಾತನಾಡಿದ್ದೇನೆ ಎಲ್ಲಾ ನೆರವನ್ನು ನೀಡಲು ಕೇಂದ್ರ ಸಿದ್ಧವಿದೆ ಎಂದು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.