ಮಾಜಿ ಚಾಂಪಿಯನ್ ಶ್ರೀಲಂಕಾ ಹಾಗೂ ಈಗಾಗಲೆ ಸೆಮೀಸ್ ಆಸೆ ಕೈಚೆಲ್ಲಿರುವ ಬಾಂಗ್ಲಾದೇಶ ತಂಡಗಳು ಸೋಮವಾರ ರಾಷ್ಟ್ರ ರಾಜಧಾನಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
2025ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ಶಕೀಬ್ ಅಲ್ ಹಸನ್ ಪಡೆಗೆ ಈ ಪಂದ್ಯ ಮಹತ್ವದ್ದಾಗಿದೆ.
ವಾಯು ಮಾಲಿನ್ಯದಿಂದಾಗಿ ಲಂಕಾ ತಂಡದ ಆಟಗಾರರು ಅಭ್ಯಾಸಕ್ಕೆ ಕ್ರೀಡಾಂಗಣಕ್ಕೆ ತೆರಳದೆ, ಹೋಟೆಲ್ನಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಬುಧವಾರ ದೆಹಲಿಗೆ ಆಗಮಿಸಿದ ಬಳಿಕ ಮೊದಲ ಎರಡು ದಿನ ಅಭ್ಯಾಸದಿಂದ ದೂರ ಉಳಿದಿದ್ದ ಬಾಂಗ್ಲಾದೇಶ ಆಟಗಾರರು ಭಾನುವಾರ ಮುಖಗವಸು ಧರಿಸಿ ತಯಾರಿ ನಡೆಸಿದ್ದಾರೆ. ಅಸ್ತಮ ಸಮಸ್ಯೆ ಹೊಂದಿರುವ ಆಟಗಾರರು ಅಭ್ಯಾಸದಿಂದ ದೂರ ಉಳಿದಿದ್ದಾರೆ. ದೆಹಲಿ ವಾಯು ಮಾಲಿನ್ಯದ ಸೂಚ್ಯಂಕ 400ರ ಗಡಿ ದಾಟಿದ್ದು, ಭಾನುವಾರ 457ಕ್ಕೆ ತಲುಪಿದೆ. ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.8ರ ಪ್ರಕಾರ ಪಂದ್ಯದ ವೇಳೆ ಹಮಾಮಾನ ವೈಪರೀತ್ಯ ಅಥವಾ ಕ್ರೀಡಾಂಗಣದ ಗುಣಮಟ್ಟ, ಬೆಳಕಿನ ಕೊರತೆ ಅಥವಾ ಭಯದ ವಾತಾವರಣ ಸಂದರ್ಭದಲ್ಲಿ ಪಂದ್ಯವನ್ನು ರದ್ದುಗೊಳಿಸುವ ಬಗ್ಗೆ ಮ್ಯಾಚ್ ರೆಫ್ರಿ ಸಲಹೆ ಬಳಿಕ ಅಂಪೈರ್ಗಳ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ಪಂದ್ಯ ರದ್ದು ಅಥವಾ ಸ್ಥಳಾಂತರದ ಬಗ್ಗೆ ಐಸಿಸಿ ಅಧಿಕಾರಿಗಳು ವಾಯು ಮಾಲಿನ್ಯದ ಪರೀಕ್ಷೆ ನಡೆಸಿದ ಬಳಿಕ ನಿರ್ಧರಿಸಲಾಗುವುದು ಎಂದು ಐಸಿಸಿ ಸ್ಪಷ್ಟವಾಗಿ ಹೇಳಿದೆ.