ಆಮಿರ್ ಖಾನ್ ನಿರ್ಮಾಣದ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಚಿತ್ರ ಒಟಿಟಿಗೆ ಬಂದ ಬಳಿಕ ಜನರು ಮತ್ತಷ್ಟು ಮೆಚ್ಚಿಕೊಂಡಿದ್ದರು. ಈ ಸಿನಿಮಾ ‘ಆಸ್ಕರ್ 2025’ ರೇಸ್ನಲ್ಲಿ ಇದ್ದು ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಈಗ ಆಸ್ಕರ್ ರೇಸ್ನಲ್ಲಿ ಇರುವ ಕಾರಣಕ್ಕೆ ಸಿನಿಮಾದ ಟೈಟಲ್ ಬದಲಿಸಲು ಚಿತ್ರ ತಂಡ ಮುಂದಾಗಿದೆ. ಆಸ್ಕರ್ ಮಟ್ಟದಲ್ಲಿ ಸಿನಿಮಾ ಕ್ಯಾಂಪೇನ್ ಮಾಡಲು ಈ ಚಿತ್ರಕ್ಕೆ ‘ಲಾಸ್ಟ್ ಲೇಡಿಸ್’ ಎಂದು ಹೆಸರಿಡಲಾಗಿದೆ.
ಆಮಿರ್ ಖಾನ್ ಅವರ ನಿರ್ಮಾಣ ಸಂಸ್ಥೆಯಿಂದ ಈ ಬಗ್ಗೆ ಘೋಷಣೆ ಆಗಿದೆ. ‘ಲಾಸ್ಟ್ ಲೇಡಿಸ್’ ಎಂದು ಟೈಟಲ್ ಬದಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ‘ಕಾಯುವಿಕೆ ಪೂರ್ಣಗೊಂಡಿದೆ. ಲಾಸ್ಟ್ ಲೇಡಿಸ್ ಚಿತ್ರದ ಅಧಿಕೃತ ಪೋಸ್ಟರ್. ಫೂಲ್ ಹಾಗೂ ಜಯಾಳ ಪ್ರಯಾಣದ ಬಗ್ಗೆ ಈ ಸಿನಿಮಾ ಹೇಳುತ್ತದೆ’ ಎಂದು ಆಮಿರ್ ಖಾನ್ ಪ್ರೊಡಕ್ಷನ್ಸ್ ಹೇಳಿಕೊಂಡಿದೆ.
ನ್ಯೂಯಾರ್ಕ್ನಲ್ಲಿ ‘ಲಾಸ್ಟ್ ಲೇಡಿಸ್’ ಚಿತ್ರದ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಶೆಫ್ ವಿಕಾಸ್ ಖನ್ನಾ ಅವರು ನ್ಯೂಯಾರ್ಕ್ನಲ್ಲಿ ಈ ಶೋ ಹೋಸ್ಟ್ ಮಾಡಿದ್ದಾರೆ. ಆಮಿರ್ ಖಾನ್ ನಿರ್ಮಾಣ ಸಂಸ್ಥೆ ದೊಡ್ಡ ಮಟ್ಟದಲ್ಲಿ ಆಸ್ಕರ್ ಕ್ಯಾಂಪಿಂಗ್ ಮಾಡುತ್ತಿದೆ.
ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆ ಆಗುತ್ತಾರೆ. ಹೆಂಡತಿಯರನ್ನು ಕಳೆದುಕೊಂಡ ಗಂಡಂದಿರಿಗೆ ಹುಡುಕುವುದೇ ದೊಡ್ಡ ಕಾಯಕ ಆಗುತ್ತದೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ. ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ಮುಖ್ಯವಾದ ಮೂರು ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಪರ್ಶ್ ಶ್ರೀವಾಸ್ತವ, ಪ್ರತಿಭಾ ರಂಟಾ, ನಿತಾಂಶಿ ಗೋಯಲ್ ಅವರಿಗೆ ಇದು ಮೊದಲ ಸಿನಿಮಾ. ರವಿ ಕಿಶನ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.