ಲಕ್ನೋ: ಉತ್ತರ ಪ್ರದೇಶದಲ್ಲಿ ಕಾನೂನು ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ಕೊಠಡಿಯಲ್ಲಿ ಬೆಳಕಿಗೆ ಬಂದಿದೆ. ರಾಮ್ ಮನೋಹರ್ ಲೋಹಿಯಾ ಕಾನೂನು ವಿವಿ ಹಾಸ್ಟೆಲ್ ಕೊಠಡಿಯಲ್ಲಿ ನೆಲದ ಮೇಲೆ ಕಾನೂನು ವಿದ್ಯಾರ್ಥಿನಿ ಅನಿಕಾ ರಸ್ತೋಗಿ ಶವವಾಗಿ ಪತ್ತೆಯಾಗಿದ್ದಾರೆ.
3ನೇ ವರ್ಷದ ಎಲ್ಎಲ್ಬಿ ವಿದ್ಯಾರ್ಥಿನಿಯಾಗಿರುವ ಅನಿಕಾ, ಪ್ರಸ್ತುತ ದೆಹಲಿ NIA ಇನ್ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ್ ರಸ್ತೋಗಿ ಅವರ ಪುತ್ರಿ. ಅನಿಕಾ ಶನಿವಾರ ತಡರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಕೆಯನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಕೆಯ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಕೇಸ್ ದಾಖಲಿಸಿಕೊಂಡು ಆಶಿಯಾನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅನಿಕಾ ಶನಿವಾರ ಬೇಗನೆ ಹಾಸ್ಟೆಲ್ ರೂಮ್ ಸೇರಿಕೊಂಡಿದ್ದರು. ಎಷ್ಟು ಬಾರಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಹಾಸ್ಟೆಲ್ ರೂಮ್ ಬಾಗಿಲು ಬಡಿದರೂ ಆಕೆ ತೆರೆಯದೇ ಇದ್ದಾಗ ಬಾಗಿಲು ಒಡೆದು ನೋಡಿದ್ದಾರೆ. ಆಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಕೆಯಿದ್ದ ಕೊಠಡಿಯಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಸಹ ತಿಳಿದುಬಂದಿದೆ. ಅಲ್ಲದೇ ಅನಿಕಾ ಅವರ ಬಟ್ಟೆ ಯಥಾಸ್ಥಿತಿಯಲ್ಲಿತ್ತು, ಆಕೆ ದೇಹದಲ್ಲೂ ಯಾವುದೇ ಗಾಯಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.