ಲಕ್ನೋ: ಬಿಎಸ್ಪಿ ಮಾಜಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ನ (Atiq Ahmed) ವಕೀಲನನ್ನು ಉತ್ತರ ಪ್ರದೇಶ (Uttar Pradesh) ಪೊಲೀಸರು (Police) ಬಂಧಿಸಿದ್ದಾರೆ. ಆರೋಪಿ ವಿಜಯ್ ಮಿಶ್ರಾ ಹತ್ಯೆಗೀಡಾದ ಉಮೇಶ್ ಪಾಲ್ ಇರುವ ಸ್ಥಳದ ಮಾಹಿತಿಯನ್ನು ಹಂತಕರಿಗೆ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಲಕ್ನೋದ ಹೋಟೆಲ್ ಒಂದರಲ್ಲಿ ಮಿಶ್ರಾನನ್ನು ಬಂಧಿಸಲಾಗಿದೆ.
ಅಲ್ಲದೇ ವಕೀಲ ವಿಜಯ್ ಮಿಶ್ರಾ 3 ಕೋಟಿ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ಉದ್ಯಮಿಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ಆತನ ವಿರುದ್ಧ ಪ್ರಯಾಗ್ರಾಜ್ನ ಅತ್ತರ್ಸುಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರ ಅತೀಕ್ ಅಹ್ಮದ್ ಹತ್ಯೆಯ ನಂತರ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ಸಯೀದ್ ಎಂಬ ಪ್ಲೈವುಡ್ ವ್ಯಾಪಾರಿ ಪೊಲೀಸ್ ಠಾಣೆಗೆ ಬಂದು ವಿಜಯ್ ಮಿಶ್ರಾ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದ್ದರು. ಹಣ ನೀಡದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಿಶ್ರಾ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಹಗಲಿನ ವೇಳೆಯಲ್ಲೇ ಉಮೇಶ್ ಪಾಲ್ ಹತ್ಯೆ ನಡೆದಿತ್ತು. ಹತ್ಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಘಟನೆಯ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಮಾಫಿಯಾ ವನ್ನು ಸಂಪೂರ್ಣವಾಗಿ ಮಟ್ಟ ಹಾಕುವುದಾಗಿ ವಿಧಾನಸಭೆಯಲ್ಲಿ ಪ್ರತಿಜ್ಞೆ ಮಾಡಿದ್ದರು.