ಬೆಂಗಳೂರು: ಭಕ್ತರು ಕೊಟ್ಟ ಹುಂಡಿ ದುಡ್ಡು ಮೇಲೆ ಬೊಮ್ಮಾಯಿ ಸರ್ಕಾರದ ಕಣ್ಣು ಬಿದ್ದಂತಿದೆ. ಬಿಜೆಪಿ ಶಾಸಕರೊಬ್ಬರು ಮುಕ್ಕಣ್ಣನಿಗೆ ಮೂರು ನಾಮ ಹಾಕಲು ಹೊರಟಿರುವುದು ಬಯಲಾಗಿದೆ. ಚುನಾವಣೆ (Karnataka Election 2023) ಯ ಹೊಸ್ತಿಲಲ್ಲಿ ಜಾತಿ ರಾಜಕಾರಣದ ಓಲೈಕೆಗಾಗಿ ದೇವರ ದುಡ್ಡಲ್ಲಿ ಸಮುದಾಯ ನಿರ್ಮಾಣಕ್ಕೆ ಸ್ಕೆಚ್ ಅಷ್ಟೇ ಅಲ್ಲ ಶಾದಿ ಮಹಲ್ಗೂ ಪ್ರಸ್ತಾಪ ಮಾಡಲಾಗಿದೆ.
ಸಿಎಂ ಕೂಡ ಕಣ್ಣು ಮುಚ್ಚಿ ಗ್ರೀನ್ ಸಿಗ್ನಲ್ ನೀಡಿರುವುದು ಬೆಳಕಿಗೆ ಬಂದಿದೆ.
ಹೌದು. ದೇವರ ಹುಂಡಿ ದುಡ್ಡು, ಅದು ಭಕ್ತರ ನಂಬಿಕೆ ಹರಕೆ. ತಮ್ಮ ನೆಚ್ಚಿನ ದೇವರಿಗಾಗಿ, ದೇವಸ್ಥಾನದ ಉದ್ಧಾರಕ್ಕಾಗಿ ಭಕ್ತರ ಕೊಡುಗೆ. ಆದರೆ ಈ ರಾಜಕೀಯ ನಾಯಕರ ಕಣ್ಣು ಎಲೆಕ್ಷನ್ ಟೈಂನಲ್ಲಿ ಹುಂಡಿಯ ಮೇಲೆಯೂ ಬಿದ್ದಿದೆ.
ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್ (BJP MLA Harshavardhan) ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ (Srikanteshwara Temple, Nanjangud) ದ ನಿಧಿಯಲ್ಲಿ ಸಾಕಷ್ಟು ಅನುದಾನವಿದೆ. ಹೀಗಾಗಿ ಈ ದುಡ್ಡು ಬಳಸಿ ಶಾದಿ ಮಹಲ್ ಸೇರಿದಂತೆ ಸಮುದಾಯ ಭವನ ನಿರ್ಮಾಣಕ್ಕಾಗಿ ಸಿಎಂ ಮೊರೆ ಹೋಗಿದ್ದಾರೆ. ಮುಜರಾಯಿ ಇಲಾಖೆ (Muzrai Department) ಕಾಯ್ದೆ ಪ್ರಕಾರ ದೇಗುಲದ ಹುಂಡಿ ದುಡ್ಡನ್ನು ಆ ದೇಗುಲದ ಅಭಿವೃದ್ಧಿಗೆ ಬಳಕೆ ಮಾಡಬೇಕು. ಪಕ್ಕದ ದೇವಸ್ಥಾನಕ್ಕೆ ಕೂಡ ಬಳಕೆ ಮಾಡಬೇಕಾದ್ರೂ ನೂರೆಂಟು ಕಾನೂನು ಇದೆ. ಆದರೆ ಇದು ನೋಡಿ ವಿಪರ್ಯಾಸ. ಕೋಟಿ ಕೋಟಿ ದುಡ್ಡು ಅನುದಾನ ಬಂದ್ರೂ ದೇವಸ್ಥಾನದ ಹುಂಡಿ ದುಡ್ಡಿನ ಮೇಲೆ ಕಣ್ಣು ಹಾಕಿದ್ದಾರೆ. ಹಾಗಿದ್ರೆ ಶಾಸಕ ದೇವರ ದುಡ್ಡಲ್ಲಿ ನಂಜನಗೂಡಿನಲ್ಲಿ ಏನೆನೆಲ್ಲ ಕಾಮಗಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂಬುದನ್ನು ನೋಡೋಣ.
* ಬಾಬು ಜಗಜೀವನ್ ರಾಮ್ ಸಮುದಾಯ ಭವನ -1 ಕೋಟಿ
* ಮಡಿವಾಳ ಸಮುದಾಯ ಭವನ – 50 ಲಕ್ಷ
* ಈಡಿಗ ಸಮುದಾಯ ಭವನ – 70 ಲಕ್ಷ
* ಸವಿತಾ ಸಮಾಜದವರ ಸಮುದಾಯ ಭವನ – 80 ಲಕ್ಷ
* ಉಪ್ಪಾರ ಸಮುದಾಯ- 2 ಕೋಟಿ
* ಪೌರಕಾರ್ಮಿಕರ ಸಮುದಾಯ ಭವನ -1 ಕೋಟಿ
* ಷಾದಿ ಮಹಲ್ ನಿರ್ಮಾಣ -1 ಕೋಟಿ 50 ಲಕ್ಷ
* ವಾಲ್ಮೀಕಿ ಭವನ – 50 ಲಕ್ಷ
* ವಿಶ್ವಕರ್ಮ ಸಮುದಾಯ ಭವನ -30 ಲಕ್ಷ
* ಕುಂಬಾರ ಸಮುದಾಯ ಭವನ – 30 ಲಕ್ಷ
* ಒಕ್ಕಲಿಗ, ಗೆಜ್ಜೆಗಾರ ಸಮುದಾಯ , ಗಾಣಿಗರ ಭವನ – ತಲಾ ಮೂವತ್ತು ಲಕ್ಷ
ದೇವರ ಹುಂಡಿ ದುಡ್ಡಲ್ಲಿ ಕಾಮಗಾರಿಗೆ ಪ್ರಸ್ತಾಪ ಸಲ್ಲಿಸಿದ್ದಾರೆ. ವಿಚಿತ್ರ ಅಂದ್ರೆ ನೇರವಾಗಿ ಸಿಎಂ ಬೊಮ್ಮಾಯಿ (Basavaraj Bommai) ಬಳಿಯೇ ಈ ಫೈಲ್ ಹೋಗಿದ್ದು ಸಿಎಂ, ಶಾದಿ ಮಹಲ್ ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗೂ ಶ್ರೀಕಂಠೇಶ್ವನ ದುಡ್ಡು ಬಳಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಜರಾಯಿ ಕಾನೂನು ಉಲ್ಲಂಘಿಸಿ ಈ ತರಾತುರಿಯಲ್ಲಿ ಸಿಎಂ ಅನುಮತಿ ನೀಡಿದ್ದು ಎಲ್ಲರ ಹುಬ್ಬೇರಿಸಿದೆ. ಭಕ್ತರ ದುಡ್ಡನ್ನು ಹೀಗೆ ಖುಲ್ಲಾಂ ಖುಲ್ಲಾ ದುರ್ಬಳಕೆ ಮಾಡಿಕೊಳ್ಳೋದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ.