ಹುಬ್ಬಳ್ಳಿ- ಧಾರವಾಡ: ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವ ಣೆಯಾಗಲಿದೆ ಎಂಬ ಭವಿಷ್ಯವನ್ನು ಮಣ್ಣಿನ ಬೊಂಬೆ ತೋರಿಸಿಕೊಟ್ಟಿದೆ.
ಹೌದು! ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು ಒಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ.
ಅಮವಾಸ್ಯೆಯಂದು ತಮ್ಮ ಗ್ರಾಮದ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ. ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ.
ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೆ ದಿನ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ ಯಾವ್ಯಾವ ಭಾಗಕ್ಕೆ ಪೆಟ್ಟಾಗಿದೆ ಎಂಬುದನ್ನು ನೋಡಿ ಅದರ ಮೇಲೆ ಆ ಭಾಗದ ಭವಿಷ್ಯವನ್ನು ಇವರು ನಿರ್ಧರಿಸುತ್ತಾರೆ. ಮಳೆ ಹೇಗಿದೆ ಹಾಗೂ ಯಾವ ಬೆಳೆಗೆ ಬೆಲೆ ಸಿಗುತ್ತದೆ ಎಂಬುದನ್ನೂ ಇವರ ನಿರ್ಧರಿಸುತ್ತಾರೆ.
ಪ್ರಸಕ್ತ ವರ್ಷ ಕರ್ನಾಟಕ ದಿಕ್ಕಿನ ರಾಜಕೀಯ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ನಮ್ಮ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಯಾಗಬಹುದು ಎಂದು ಊಹಿಸಲಾಗಿದೆ. ಸದ್ಯ ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಈ ಬೊಂಬೆ ಭವಿಷ್ಯದ ಪ್ರಕಾರ ನಾಯಕತ್ವ ಬದಲಾಗಬಹುದು ಎಂದು ಬೊಂಬೆ ಭವಿಷ್ಯ ನುಡಿದಿದೆ.
ಯಡಿಯೂರಪ್ಪನವರು ಸಿಎಂ ಆಗಿದ್ದ ಸಂದರ್ಭದಲ್ಲಿ ನಮ್ಮ ರಾಜ್ಯದ ನಾಯಕತ್ವ ಬದಲಾಗಬಹುದು ಎಂಬುದನ್ನು ಈ ಬೊಂಬೆ ಭವಿಷ್ಯ ನುಡಿದಿತ್ತು. ಆ ಪ್ರಕಾರ ಯಡಿಯೂರಪ್ಪನವರು ಕೆಳಗಿಳಿದ ಪ್ರಸಂಗ ಎಲ್ಲರಿಗೂ ಗೊತ್ತೇ ಇದೆ.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ಹನುಮನಕೊಪ್ಪ ಗ್ರಾಮಸ್ಥರು ಮಾಡಿದ್ದ ಈ ಆಚರಣೆಯಲ್ಲಿ ರಾಷ್ಟ್ರನಾಯಕರ ಬೊಂಬೆಯೊಂದು ಉರುಳಿ ಬಿದ್ದಿತ್ತು. ರಾಷ್ಟ್ರನಾಯಕರಿಗೆ ಆಪತ್ತು ಎದುರಾಗಬಹದು ಎಂಬುದನ್ನು ಆ ಮೂಲಕ ಬೊಂಬೆ ಹೇಳಿತ್ತು. ಅದರ ತರುವಾಯಿ ಇಂದಿರಾಗಾಂಧಿ ಹತ್ಯೆ ಕೂಡ ಆಯಿತು.
ಸದ್ಯ ರಾಜ್ಯ ರಾಜಕಾರಣದ ಬೊಂಬೆಯ ಬಲಗಾಲಿಗೆ ಪೆಟ್ಟಾಗಿದ್ದು, ಇದು ನಾಯಕತ್ವ ಬದಲಾವಣೆಯ ಮುನ್ಸೂಚನೆಯನ್ನು ನೀಡಿದೆ. ಈ ಗ್ರಾಮಸ್ಥರು ಅನೇಕ ವರ್ಷಗಳಿಂದ ಈ ಆಚರಣೆ ಮಾಡುತ್ತ ಬಂದಿದ್ದು, ಅನೇಕ ಸಂಗತಿಗಳು ನಿಜ ಕೂಡ ಆಗಿವೆ.
ವರದಿ: ಕಲ್ಮೇಶ ಮಂಡ್ಯಾಳ, ಹುಬ್ಬಳ್ಳಿ ಧಾರವಾಡ