ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆದು ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗು ತಿಳಿದಿದೆ. ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಒಳ್ಳೆದು ಎಂದು ಹೆಚ್ಚು ನಿಂಬೆರಸ ಸೇವಿಸಿದರೆ ಆರೋಗ್ಯ ಹಾನಿಕರ ಎನ್ನುವ ಬಗ್ಗೆ ಹಲವರಿಗೆ ತಿಳಿದಿಲ್ಲ.
ಹೌದು. ಅನೇಕ ಮನೆಮದ್ದುಗಳಲ್ಲಿ ನಿಂಬೆರಸ ಬಳಸಲಾಗುತ್ತದೆ. ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟಬಹುದೆಂದು ಅಧ್ಯಯನಗಳು ಹೇಳಿವೆ. ಇದರ ಜೊತೆಗೆ ಅತಿಯಾಗಿ ನಿಂಬೆರಸ ಸೇವಿಸಿದರೆ ಎಷ್ಟು ಅಪಾಯಕಾರಿ ಎನ್ನುವುದನ್ನ ಕೂಡ ಅಧ್ಯಯನಗಳೇ ತಿಳಿಸಿವೆ.
ಆರೋಗ್ಯಕರ ಗುಣವಿರುವ ನಿಂಬೆಹಣ್ಣಿನ ರಸವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ತಿಳಿಯದಿದ್ದರೆ ಅಪಾಯ ತಪ್ಪಿದ್ದಲ್ಲ. ನಿಂಬೆ ಹಣ್ಣಿನಲ್ಲಿರುವ ಆಮ್ಲೀಯ ಗುಣ ಹೆಚ್ಚಾಗಿ ದೇಹ ಸೇರಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಎಷ್ಟು ಪ್ರಮಾಣದಲ್ಲಿ ನಿಂಬೆರಸ ಸೇವನೆ ಮಾಡಬೇಕು?
ನಿಂಬೆರಸ ಎಷ್ಟು ಸೇವಿಸಬೇಕು ಎಂಬುದು ವ್ಯಕ್ತಿಯ ವಯಸ್ಸು, ಆರೋಗ್ಯ ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತೆ. ನಿಂಬೆರಸವನ್ನು ಇಷ್ಟೇ ಪ್ರಮಾಣದಲ್ಲಿ ಸೇವಿಸಬೇಕು ಎಂದು ನಿರ್ಧರಿಸಲು ಸಾಕಷ್ಟು ವೈಜ್ಞಾನಿಕ ಮಾಹಿತಿಗಳಿಲ್ಲ. ಆದರೆ ವೈದ್ಯರ ಪ್ರಕಾರ, ದಿನಕ್ಕೆ ಒಂದು ಲೋಟ ಅಥವಾ ಎರಡು ಲೋಟ ನಿಂಬೆರಸ (ಸುಮಾರು 120 ಮಿಲಿ) ಸುರಕ್ಷಿತವೆಂದು ಸೂಚಿಸಲಾಗಿದೆ. ಅದಕ್ಕಿಂತ ಹೆಚ್ಚು ನಿಂಬೆರಸ ಸೇವಿಸುವುದು ಒಳ್ಳೆಯದಲ್ಲ ಎನ್ನಲಾಗುತ್ತೆ.
ಹೆಚ್ಚು ನಿಂಬೆರಸ ಸೇವಿಸಿದ್ರೆ ಏನಾಗುತ್ತೆ?
- ಹಲ್ಲಿನ ಸಮಸ್ಯೆ
ಅತಿಯಾದ ನಿಂಬೆರಸ ಸೇವನೆಯಿಂದ ಅದರಲ್ಲಿರುವ ಆಮ್ಲೀಯ ಗುಣ ಹಲ್ಲಿನ ಮೆರುಗನ್ನು ನಾಶಗೊಳಿಸಬಹುದು. ಇತರೆ ತಂಪು ಪಾನೀಯಗಳಂತೆ ನಿಂಬೆರಸ ಕೂಡ ಹಲ್ಲಿನ ಸಮಸ್ಯಗೆ ಕಾರಣವಾಗಿದೆ. ಆದರೆ ನಿಂಬೆರಸ ಸೇವನೆಯ ಬಳಿಕ ಹಲ್ಲನ್ನು ಉಜ್ಜುವುದರಿಂದ ಹಲ್ಲಿನ ಸವೆತವನ್ನು ತಡೆಗಟ್ಟಬಹುದು. - ಎದೆಯುರಿ ಉಂಟುಮಾಡುತ್ತದೆ
ಕೆಲವು ಸಂಶೋಧನೆಗಳ ಪ್ರಕಾರ, ಸಿಟ್ರಸ್ ಅಂಶ ಒಳಗೊಂಡ ಹಣ್ಣುಗಳು ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್ ಗೆ ಕಾರಣವಾಗಬಹುದು. ನಿಂಬೆರಸ ಎದೆಯುರಿಯನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಲೂ ಬಹುದು. ಆದರೆ ಅತೀಯಾಗಿ ನಿಂಬೆರಸ ಸೇವಿಸಿದರೆ ಎದೆಯುರಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎದೆಯುರಿ ಸಮಸ್ಯೆ ಇದ್ದರೆ ನಿಂಬೆರಸ ಅಥವಾ ಯಾವುದೇ ಸಿಟ್ರಿಕ್ ಅಂಶದ ಪಾನಿಯ ಕುಡಿಯುವ ಮೊದಲು ವೈದ್ಯರ ಸಲಹೆ ಪಡೆಯೋದು ಸೂಕ್ತ. - ಮೈಗ್ರೇನ್ ಹೆಚ್ಚಿಸುತ್ತದೆ
ಸಿಟ್ರಸ್ ಹಣ್ಣುಗಳು ಮೈಗ್ರೇನ್ ಅನ್ನು ಹೆಚ್ಚು ಮಾಡುತ್ತದೆ. ಸಿಟ್ರಸ್ ಹಣ್ಣುಗಳನ್ನು ಮಿತಿಮೀರಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ. ಈ ಹಣ್ಣುಗಳು ಅಲರ್ಜಿ ಉಂಟುಮಾಡುವುದರ ಮೂಲಕ ಮೈಗ್ರೇನ್ಗೆ ಕಾರಣವಾಗಬಹುದು. ಸಿಟ್ರಸ್ ಹಣ್ಣುಗಳಲ್ಲಿ ಟೈರಮೈನ್ ಅಂಶ ಇರುತ್ತದೆ. ಇದು ಮೈಗ್ರೇನ್ ಗೆ ಪ್ರಮುಖ ಕಾರಣವಾಗಿದೆ. - ಬಾಯಿ ಹುಣ್ಣನ್ನು ಉಲ್ಬಣಗೊಳಿಸಬಹುದು
ಬಾಯಿ ಹುಣ್ಣುಗಳಲ್ಲಿ ಕ್ಯಾಂಕರ್ ಹುಣ್ಣುಗಳು ಒಂದು ರೂಪ. ಇವು ಬಾಯಿಯೊಳಗೆ ಉಂಟಾಗುವ ಹುಣ್ಣುಗಲಾಗಿದ್ದು, ಹೆಚ್ಚು ನೋವಿನಿಂದ ಕೂಡಿರುತ್ತವೆ. ಸಿಟ್ರಿಕ್ ಆಮ್ಲವು ಬಾಯಿಯ ಹುಣ್ಣುಗಳನ್ನು ಇನ್ನಷ್ಟು ಹೆಚ್ಚು ಮಾಡುವುದರಿಂದ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.