ಬೆಂಗಳೂರು: ಆನೇಕಲ್ ತಾಲೂಕಿನ ಗಟ್ಟಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇಂದು ಮುಂಜಾನೆ ನಾಲ್ಕು ಗಂಟೆಗೆ ಹುಸ್ಕೂರು ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡಿದೆ ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ..ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ ರಸ್ತೆಯಲ್ಲಿ ಇಂದು ನಸುಕಿನ ಜಾವ ತೆರಳುತ್ತಿದ್ದ ಬೈಕ್ ಸವಾರನಿಗೆ ಚಿರತೆ ಕಾಣಿಸಿದೆ. ಕೂಡಲೇ ಮೊಬೈಲ್ನಲ್ಲಿ ಚಿರತೆ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ..
ಇನ್ನು ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋನ್ ಇಟ್ಟಿದ್ದಾರೆ. ಕಳೆದ ವಾರವಷ್ಟೇ ಚಿರತೆಯೊಂದು ಕೋಳಿಯನ್ನು ಬೇಟೆಯಾಡಿ ತಿಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಳೆದ ವಾರ ಗಟ್ಟಹಳ್ಳಿ,
ಹುಸ್ಕೂರು, ಕನ್ನಲ್ಲಿ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿತ್ತು. ಈಗ ಪ್ರತ್ಯಕ್ಷವಾಗಿರುವುದು ಅದೇ ಚಿರತೆ ಎಂದು ಅಂದಾಜಿಸಲಾಗಿದೆ. ಚಿರತೆ ಕಂಡು ಬಂದ ಪ್ರದೇಶದಲ್ಲಿ 400 ಎಕರೆ ಸಿಲ್ಕ್ ಫಾರ್ಮ್ ಇದ್ದು, ಚಿರತೆಯ ಚಲನವಲನ ಕಂಡು ಹಿಡಿಯಲು ಅನುಕೂಲವಾಗಲಿದೆ. ಹಾಗೆಯೇ, ಮತ್ತೊಂದು ಬೋನ್ ಇಡಲು ಅರಣ್ಯಾಧಿಕಾರಿಗಳು ಸಜ್ಜಾಗಿದ್ದಾರೆ…