ಮಂಡ್ಯ: ಮೈಸೂರಿನಿಂದ (Mysuru) ಪಲಾಯನ ಮಾಡಿಕೊಂಡು ಬಾದಾಮಿಗೆ (Badami) ಹೋಗಬೇಕಾದ ದುಸ್ಥಿತಿ ಬಂದದ್ದು ಬುರುಡೆ ಬಿಡುವ ಸಿದ್ದರಾಮಯ್ಯನವರಿಗೆ (Siddaramaiah) ಹೊರತು ನನಗಲ್ಲ ಎಂದು ಪ್ರತಾಪ್ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ (Bengaluru-Mysuru Expressway) ವಿಚಾರದಲ್ಲಿ ಪ್ರತಾಪ್ ಸಿಂಹ ಬುರುಡೆ ಬಿಡುತ್ತಾನೆ ಎಂಬ ವಿಚಾರವಾಗಿ ಮಂಡ್ಯದ (Mandya) ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮೈಸೂರಲ್ಲಿ ಯಾರು ಬುರುಡೆ, ಬೊಗಳೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ ಅವರಿಗೆ ಜನ ಬುದ್ದಿ ಕಲಿಸಿದ್ದಾರೆ. 2018ರಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರಿಗೆ, ಟಿ.ನರಸಿಪುರದಲ್ಲಿ ಮಹದೇವಪ್ಪನವರಿಗೆ (H.C.Mahadevappa) ಸರಿಯಾದ ಪಾಠ ಕಲಿಸಿದ್ದಾರೆ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ನಾನು ಮೈಸೂರಿನಲ್ಲಿ ಗೆದ್ದಿದ್ದೇನೆ. 2018ರಲ್ಲಿ ನಾನು ದಾಖಲೆಯ ಅಂತರದಲ್ಲಿ ಗೆದ್ದಿದ್ದೇನೆ. ಯಾರು ಬುರುಡೆ ಬಿಡುತ್ತಿದ್ದಾರೆ ಎಂದು ಜನ ತೀರ್ಪು ನೀಡಿದ್ದಾರೆ. ಡಾ.ಮಹದೇವಪ್ಪನವರಿಂದ ನಾನು ಏನು ಕಲಿಯುವ ಅಗತ್ಯವಿಲ್ಲ. ಮಹದೇವಪ್ಪನವರು ಅಭಿವೃದ್ಧಿಯ ವಿರೋಧಿ. ಮೈಸೂರಿನ ಜಲದರ್ಶಿನಿಯಿಂದ ಪಡುವಾರಹಳ್ಳಿಯವರೆಗೆ 6 ಲೇನ್ ಮಾಡುತ್ತೇನೆ ಎಂದು ದುಡ್ಡು ತಂದು ಮಾಡಲಿಲ್ಲ. ನ್ಯಾಷನಲ್ ಹೈವೇ (National Highway) ಯಾವ ರೀತಿ ಆಗುತ್ತದೆ ಎನ್ನುವ ಕನಿಷ್ಠ ಜ್ಞಾನ ಸಿದ್ದರಾಮಯ್ಯ ಹಾಗೂ ಮಹದೇವಪ್ಪನವರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು.
ಪಿಡಬ್ಲೂಡಿಯಲ್ಲಿರುವ ನ್ಯಾಷನಲ್ ಹೈವೇ ವಿಂಗ್ ಅವರು ಇದನ್ನು ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾರೆ. 2014ರ ಸೆಪ್ಟೆಂಬರ್ನಲ್ಲಿ ಇದರ ಡಿಪಿಆರ್ ಆಗುತ್ತದೆ. 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ಈ ಯೋಜನೆಯನ್ನು ತೆಗೆದುಕೊಳ್ಳುತ್ತದೆ. 2018 ಫೆಬ್ರವರಿ 19ರಂದು ಮೋದಿ (Narendra Modi) ಅವರು ಇದರ ಬಗ್ಗೆ ಮೈಸೂರಿನಲ್ಲಿ ಘೋಷಣೆ ಮಾಡುತ್ತಾರೆ. ಫೆಬ್ರವರಿ 20ರಂದು ಕ್ಯಾಬಿನೆಟ್ ಕಮಿಟಿ ಪ್ರಧಾನಮಂತ್ರಿಗಳು ಇದಕ್ಕೆ ಅಪ್ರೂವಲ್ ಕೊಡುತ್ತಾರೆ. ಮಾರ್ಚ್ 24ರಂದು ಇದರ ಭೂಮಿ ಪೂಜೆ ನಡೆಯುತ್ತದೆ. ಇದು ಮೋದಿ ಕನಸಿನ ಕೂಸು ಹೊರತು ಬೇರೆಯವರ ಕೂಸು ಅಲ್ಲ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ, ಮಹದೇವಪ್ಪನವರು ಎಷ್ಟೇ ಮೈ ಪರಚಿಕೊಂಡರೂ ಅವರಿಗೆ ಏನೂ ಗಿಟ್ಟುವುದಿಲ್ಲ. ಸಿದ್ದರಾಮಯ್ಯನವರು ಹೈವೇ ಪರಿಶೀಲನೆ ಮಾಡಬಾರದು ಎಂದು ನಮ್ಮ ತಕರಾರು ಇಲ್ಲ. ಸಿದ್ದರಾಮಯ್ಯನವರೇ 2 ತಿಂಗಳು ಕಾಯಿರಿ, ಜನ ಹೇಗಿದ್ದರೂ ನಿಮಗೆ ನಿವೃತ್ತಿ ಕೊಡುತ್ತಾರೆ. ಆಗ ಮೊಮ್ಮಕ್ಕಳು ಎಲ್ಲರ ಜೊತೆ ಸೇರಿ ಬೆಂಗಳೂರು-ಮೈಸೂರಿಗೆ ಜಾಲಿ ರೈಡ್ ಮಾಡಬಹುದು. ಈಗ ಪರಿಶೀಲನೆ, ರಿವ್ಯೂ ಮಾಡುವುದಕ್ಕೆ ಏನು ಉಳಿದಿಲ್ಲ. ಜಾಲಿ ರೈಡ್ ಮಾಡುವುದಕ್ಕೆ ಒಂದು ಹೈವೇ ಮಾಡಿದ್ದೇವೆ. ಅದು 12ಕ್ಕೆ ಉದ್ಘಾಟನೆ ಆಗುತ್ತದೆ. ಕುಟುಂಬ ಸಮೇತ ಬಂದು ಎಷ್ಟು ಒಳ್ಳೆ ರಸ್ತೆ ಮಾಡಿದ್ದಾರೆ, ಇಂತಹ ರಸ್ತೆ ನಮ್ಮ ಕೈಯಲ್ಲಿ ಮಾಡುವುದಕ್ಕೆ ಆಗಲಿಲ್ಲ ಎಂದು ಪಶ್ಚಾತ್ತಾಪ ಪಡಿ. ನಮ್ಮ ಮಕ್ಕಳಿಗಾದರೂ ಮೋದಿಜೀ ಒಳ್ಳೆಯ ರಸ್ತೆ ಮಾಡಿಕೊಟ್ಟಿದ್ದಾರೆ ಎಂದು ಖುಷಿಯಿಂದ ನಿಮ್ಮ ಹತ್ತಿರ ಇರುವ ಒಳ್ಳೆಯ ಕಾರ್ನಲ್ಲಿ ಓಡಾಡಿ ಎಂದು ಅಣಕಿಸಿದರು.