ಬೆಳಗಾವಿ: ನಮ್ಮ ಕೆಲವು ಮಂತ್ರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೆದರಿಸುತ್ತಿದ್ದಾನೆ. ನೀನು ಬರ್ತೀಯೋ ಅಥವಾ ಸಿಡಿ (CD) ಬಿಡುಗಡೆ ಮಾಡಲೋ ಎಂದು ಹೆದರಿಸುತ್ತಿದ್ದಾನೆ. ಇಂದು ನಮ್ಮ ಪಕ್ಷಕ್ಕೆ ಬಾಂಬೆಯಿಂದ ಬಂದವರಿಗೆ ಸಿಡಿ ಬಿಡುತ್ತೇನೆ ನೋಡು ಬಾ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಗಂಭೀರ ಆರೋಪ ಮಾಡಿದ್ದಾರೆ.
ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಮಹಾನಾಯಕ ಸಿಡಿ ಇಟ್ಟುಕೊಂಡು ಕುಳಿತಿದ್ದಾನೆ. ಅದು ನಿಜ ಆಗಿದ್ದರೆ ಆಗಲೇ ಬಿಡುಗಡೆ ಮಾಡಬೇಕಿತ್ತು. ಈಗ ಎಲೆಕ್ಷನ್ ಸಂದರ್ಭದಲ್ಲಿ ಏಕೆ? ಲಿಂಗಾಯತ, ಮುಸ್ಲಿಂ, ಎಸ್ಸಿ ಸಮುದಾಯದವರನ್ನು ಎತ್ತಿಕಟ್ಟಲು ಕುತಂತ್ರ ಮಾಡುತ್ತಿದ್ದಾನೆ. ಡಿಕೆಶಿ ಉದ್ದೇಶ ಅದೇ, ಅವನಿಗೆ ಬೇರೆ ದಾರಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸರಳತೆ ಮೆರೆದ ಪ್ರಧಾನಿ ಮೋದಿ- RSS ಮುಖಂಡರ ಕಾಲಿಗೆ ನಮಸ್ಕರಿಸಿದ ನಮೋ
ನನ್ನ ಮಗ ಅಮರನಾಥ ಬಳಿ ಅವನು ಸ್ಪಷ್ಟವಾಗಿ ಹೇಳಿದ್ದಾನೆ. ನನ್ನ ಸಿಡಿ ಕೇಸ್ ಆದಾಗ ಆತನ ಉದ್ಯೋಗ ಅದೇ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಬೇಕಾದರೆ ನನ್ನ ಮಗನ ಕರೆದೊಯ್ದು ಸುಳ್ಳೋ ನಿಜವೋ ಎಂಬುದನ್ನು ಲಕ್ಷ್ಮಿದೇವಿ ಮೇಲೆ ಆಣೆ ಮಾಡಿಸಿ. ಹೀಗಾದರೆ ನಾನು ಏನು ಮಾಡಲು ಸಾಧ್ಯ? ಯುದ್ಧ ಮಾಡೋಣ ಬಾ, ಬೇಕಾದಷ್ಟು ಗಟ್ಟಿ ಇದ್ದೇನೆ. ಕನಕಪುರಕ್ಕೆ ಬಾ ಎಂದರೆ ಅಲ್ಲಿಯೇ ಬರುತ್ತೇನೆ ಬಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ರಮೇಶ್ ಜಾರಕಿಹೊಳಿ ಬಹಿರಂಗ ಸವಾಲು ಹಾಕಿದರು.