ಬೆಂಗಳೂರು: ಕಾಂಗ್ರೆಸ್ ಪಕ್ಷ ಹಿನಾಯ ಪರಿಸ್ಥಿತಿಯಲ್ಲಿದ್ದು, ಬಿಜೆಪಿ ಸಚಿವರಿಗೆ ಸಿ.ಡಿ. ತೋರಿಸಿ ಪಕ್ಷಕ್ಕೆ ಕರೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಸದಾಶಿವನಗರ ನಿವಾಸದ ಬಳಿ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಏನೇನಾಗುತ್ತಿದೆಯೋ ಅದನ್ನು ಮೊದಲು ನೋಡಿಕೊಳ್ಳಲಿ. ನಿಮ್ಹಾನ್ಸ್ ಸೇರಬೇಕಾದ ಗಿರಾಕಿಗಳು ಹೇಳಿದ್ದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ. ಅವರನ್ನು ಆಸ್ಪತ್ರೆಗೆ ಸೇರಿಸುವುದು ಉತ್ತಮ’ ಎಂದು ತಿರುಗೇಟು ನೀಡಿದರು. ಡಿ.ಕೆ. ಶಿವಕುಮಾರ್ ಅವರ ಕೈಗೆ ರಾಜ್ಯ ಸಿಕ್ಕರೆ ಡಿ.ಕೆ. ಶಿವಕುಮಾರ್ ಟೋಲ್ ಎಂಬ ಮತ್ತೊಂದು ಟೋಲ್ ಹಾಕುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಅವರ ಆರೋಪದ ಬಗ್ಗೆ ಪ್ರಶ್ನಿಸಿದಾಗ, ‘ಟೋಲ್ ವಿಚಾರವಾಗಿ ಮಾತನಾಡುವುದೇ ಆದರೆ, ಸದ್ಯಕ್ಕೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ವಿಚಾರವಾಗಿ ಮಾತನಾಡೋಣ.
ಮಿಕ್ಕ ವಿಚಾರವನ್ನು ನಂತರ ಮಾತನಾಡೋಣ’ ಎಂದರು. ಧೃವನಾರಾಯಣ ಅವರ ಪುತ್ರನಿಗೆ ಟಿಕೆಟ್ ನೀಡುವಂತೆ ಒತ್ತಡ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಧೃವನಾರಾಯಣ ಅವರ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಇನ್ನು ಪಕ್ಷದ ಟಿಕೆಟ್ ಹಂಚಿಕೆ ವಿಚಾರವಾಗಿ ಅವರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಪಕ್ಷದ ನಿಷ್ಠಾವಂತ ನಾಯಕರಾದ ಧೃವನಾರಾಯಣ ಅವರ ವಿಚಾರದಲ್ಲಿ ನಾನು ಪ್ರಾಮಾಣಿಕವಾಗಿ ನಮ್ಮ ನಾಯಕರಿಗೆ ಯಾವ ಸಲಹೆ ನೀಡಬೇಕೋ ನೀಡಿದ್ದೇನೆ. ಧೃವನಾರಾಯಣ ಅವರಂತಹ ಕಾರ್ಯಾಧ್ಯಕ್ಷರನ್ನು ಕಳೆದುಕೊಂಡಿರುವುದು ಇಡೀ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಆ ಆಘಾತದಿಂದ ನಾವಿನ್ನೂ ಹೊರಬರಲು ಸಾಧ್ಯವಾಗಿಲ್ಲ. ಸಂಘಟನೆ ಶಕ್ತಿ, ತಾಳ್ಮೆ, ನಿಷ್ಠೆ, ಸೌಮ್ಯ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರು ಧೃವನಾರಾಯಣ ಅವರು. ಅವರ ಆತ್ಮಕ್ಕೆ ಶಾಂತಿ ಸಿಗುವಂತಹ ಕೆಲಸವನ್ನು ಪಕ್ಷ ಮಾಡಲಿದೆ’ ಎಂದು ತಿಳಿಸಿದರು.