ಚಿಕ್ಕಬಳ್ಳಾಪುರ: ಎಸ್.ಎಂ ಕೃಷ್ಣ (SM Krishna) ಅವರ ನಂತರ ರಾಜ್ಯದಲ್ಲಿ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ (K Sudhakar) ಹೇಳಿದ್ದು, ಪರೋಕ್ಷವಾಗಿ ಡಿಕೆಶಿ (DK Shivakumar) ಪರ ಬ್ಯಾಟ್ ಬೀಸಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂತರ ರಾಜ್ಯದಲ್ಲಿ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಒಕ್ಕಲಿಗರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಉತ್ತಮ ಎಂದು ವೈಯಕ್ತಿಕವಾಗಿ ಹೇಳಿದ್ದೇನೆ. ಆದ್ರೆ ಅದು ಕಾಂಗ್ರೆಸ್ಗೆ ಬಿಟ್ಟ ವಿಚಾರ ಎಂದಿದ್ದಾರೆ. ಜೆಡಿಎಸ್ ಷಡ್ಯಂತರವೇ ಸೋಲಿಗೆ ಕಾರಣ:
ಮುಂದುವರಿದು ಮಾತನಾಡಿ, ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡೆಸಿದ ರಾಜಕೀಯ ಷಡ್ಯಂತರದ ಕಾರಣ ಸೋಲನುಭವಿಸಿದೆ. ಸಂಘಟನೆ ಮೂಲಕ ಫಿನಿಕ್ಸ್ ನಂತೆ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.
ಜೆಡಿಎಸ್ ಮತಗಳು ಕಾಂಗ್ರೆಸ್ಗೆ ವರ್ಗಾವಣೆ ಮಾಡುವ ಮೂಲಕ ಅವರ ರಾಜಕೀಯ ಸಿದ್ಧಾಂತಕ್ಕೆ ಮಸಿ ಬಳಿದಿದ್ದಾರೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರದಲ್ಲಿ ಇದೇ ರೀತಿ ಷಡ್ಯಂತರ ನಡೆದಿದೆ. ಇದು ಜನರಿಗೆ ಮತ್ತು ಆ ಪಕ್ಷದ ಕಾರ್ಯಕರ್ತರಿಗೆ ಮಾಡಿದ ದ್ರೋಹ, ಜೆಡಿಎಸ್ಗೆ ಮತ ನೀಡಬೇಕಿದ್ದವರನ್ನ ದಿಕ್ಕು ತಪ್ಪಿಸಿ, ಕಾಂಗ್ರಸ್ ಗೆ ಮತ ಕೊಡಿಸಿ ಅನಿವಾರ್ಯವಾಗಿ ಸೋಲನುಭವಿಸಬೇಕಾಯಿತು ಎಂದು ವಿವರಿಸಿದ್ದಾರೆ.
ಗೆಲುವು ಶಾಶ್ವತ ಅಲ್ಲ, ಸೋಲು ಅಂತಿಮ ಅಲ್ಲ: ಇತಿಹಾಸದಲ್ಲಿ ಧೀಮಂತ ನಾಯಕರೂ ಸೋತು, ನಂತರ ಪುಟಿದೆದ್ದಿದ್ದಾರೆ. ನಿಮ್ಮ ಪ್ರೀತಿ, ವಿಶ್ವಾಸ ಇರುವವರೆಗೂ ತಾವು ಎದೆಗುಂದದೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಲಾಗುವುದು. ಮುಂದಿನ ದಿನಗಳಲ್ಲಿ ಗೆಲ್ಲುವ ವಾತಾವರಣ ನಿರ್ಮಾಣ ಮಾಡೋಣ, ಗೆಲುವು ಶಾಶ್ವತ ಅಲ್ಲ, ಸೋಲು ಅಂತಿಮವಲ್ಲ. ನಮ್ಮ ಸೇವಾ ಮನೋಭಾವ ಮುಂದುವರಿಯಲಿದೆ. ನನ್ನ ಹೃದಯ, ಮನಸ್ಸು, ಆಲೋಚನೆ ಚಿಕ್ಕಬಳ್ಳಾಪುರ ಜನತೆಯ ಅಭಿವೃದ್ಧಿಗೆ ಮೀಸಲಾಗಿದೆ. ಗೆಲುವು, ಸೋಲು ಅಡ್ಡಿ ಆತಂಕವಲ್ಲ, ಅಳಿಲು ಸೇವೆ ಜನರಿಗಾಗಿ ಮುಂದುವರಿಯಲಿದೆ, ಅವರ ಎಲ್ಲ ಕಷ್ಟಗಳಿಗೆ ಅವರ ಮನೆ ಸದಸ್ಯನಾಗಿ ನಿಲ್ಲುತ್ತೇನೆ, ಮುಂದಿನ ಚುನಾವಣೆಗಳಲ್ಲಿ ಸಂಘಟನೆ ಮಾಡಿ, ಗೆಲ್ಲುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.