ರಾಮನಗರ ;- ಜನಸ್ನೇಹಿ ಆಡಳಿತ ನೀಡಿ, ಇಲ್ಲ ನಿಮ್ಮ ದಾರಿ ನೋಡಿಕೊಳ್ಳಿ ಎಂದು ಸಂಸದ ಡಿ.ಕೆ.ಸುರೇಶ್ ಅವರು ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಆಡಳಿತ ಪಾರದರ್ಶಕವಾಗಿ ಇರಬೇಕು.
ಇಂದಿನಿಂದಲೇ ನಿಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಯಾವ ಅಧಿಕಾರಿಗೆ ಕೆಲಸ ಮಾಡಲು ಇಷ್ಟವಿದಿಯೋ ಇರಬಹುದು. ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ನಿಮಗೆ ಬೇಕಾದ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ನಿಮಗೆ ಅನುಕೂಲ ಇರುವ ಕಡೆಗೆ ಹೋಗುವುದಾದರೆ ಹೋಗಿ ನಮ್ಮದೇನು ಅಭ್ಯಂತರ ಇಲ್ಲ. ನಿಮ್ಮ ತಲೆಯಲ್ಲಿ ವರ್ಗಾವಣೆ ಆಲೋಚನೆ ಬಂದಿದ್ದರೆ ನಾನೇನು ಮಾಡಲು ಆಗಲ್ಲ. ನಿಮ್ಮನ್ನು ವರ್ಗಾವಣೆ ಮಾಡುವುದು ಸುಲಭ. ಆ ರೀತಿ ವರ್ಗಾವಣೆ ಮಾಡಿಸುವ ವ್ಯಕ್ತಿ ನಾನಲ್ಲ. ನೀವಾಗಿ ನೀವು ಹೋಗುವುದಾದರೆ ಹೋಗಬಹುದು ಎಂದು ಹೇಳಿದರು.
ಸರ್ಕಾರಿ ಅಧಿಕಾರಿಗಳು ರೈತರು ಮತ್ತು ಜನಸಾಮಾನ್ಯರ ಕಷ್ಟಸುಖಗಳನ್ನು ಆಲಿಸುವುದರ ಜೊತೆಗೆ ಅದಕ್ಕೆ ಪರಿಹಾರ ಸೂಚಿಸಬೇಕು. ಇನ್ನು ಮುಂದೆ ನಿಮ್ಮ ಪರ್ಸೆಂಟೇಜ್ , ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಬೇಕು. ಜನರ ಭಾವನೆಗಳು ಹಿಂದಿನ ಸರ್ಕಾರದ ಆಡಳಿತದ ವಿರುದ್ಧ ಇತ್ತು. ಭ್ರಷ್ಟಾಚಾರ ಎಂಬುದು ಸಾಕೆನ್ನುವಷ್ಟರ ಮಟ್ಟಿಗೆ ತಲುಪಿತ್ತು. ಹೀಗಾಗಿ ಬದಲಾವಣೆ ಬಯಸಿ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ ಎಂದು ತಾಕೀತು ಮಾಡಿದರು.