ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (Gandhi Jayanti) ಅವರ 154ನೇ ಜಯಂತಿ ಅಂಗವಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯ ರಾಜ್ಘಾಟ್ಗೆ ತೆರಳಿ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು. ಮಹಾತ್ಮಾ ಗಾಂಧಿಯವರ ಪ್ರಭಾವವು ಜಾಗತಿಕವಾಗಿದೆ. ಏಕತೆ ಮತ್ತು ಸಹಾನುಭೂತಿಯನ್ನು ಉತ್ತೇಜಿಸಲು ಪ್ರಪಂಚದಾದ್ಯಂತ ಜನರನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಇದಕ್ಕೂ ಮೊದಲು ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದ ಅವರು, ಗಾಂಧಿ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾನು ಮಹಾತ್ಮ ಗಾಂಧಿ ಅವರಿಗೆ ನಮಸ್ಕರಿಸುತ್ತೇನೆ. ಅವರ ಕಾಲಾತೀತ ಬೋಧನೆಗಳು ನಮ್ಮ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ. ಮಹಾತ್ಮ ಗಾಂಧಿಯವರ ಪ್ರಭಾವವು ಜಾಗತಿಕವಾಗಿದೆ.
ಇಡೀ ಮಾನವಕುಲವನ್ನು ಏಕತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲು ಪ್ರೇರೇಪಿಸುತ್ತದೆ. ಅವರ ಕನಸುಗಳನ್ನು ನನಸಾಗಿಸಲು ನಾವು ಯಾವಾಗಲೂ ಕೆಲಸ ಮಾಡೋಣ. ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕನು ತಾನು ಕನಸು ಕಂಡ ಬದಲಾವಣೆಯ ಏಜೆಂಟ್ ಆಗಲು ಸಾಧ್ಯವಾಗಲಿ. ಎಲ್ಲದರಲ್ಲೂ ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.