ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು, ಎಷ್ಟು ಸಾಧ್ಯವೋ ಅಷ್ಟು ಬೇಗ ಈ ಸರ್ಕಾರ ಕಿತ್ತೊಗೆಯೋಣ ಹಾಗೆ ಅದಕ್ಕಾಗಿ ನಾನು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕೂತು ಪ್ರತಿಭಟನೆ ಮಾಡ್ತೇನೆ. ಎಲ್ಲರೂ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.
ಎಷ್ಟು ಬೇಗ ಸಾಧ್ಯವೋ ಅಷ್ಟುಬೇಗ ಈ ಸರ್ಕಾರವನ್ನ ಕಿತ್ತೊಗೆಯೋಣ. ನಾವು ಮನಸ್ಸು ಮಾಡಿದ್ರೆ, ವಿಧಾನ ಮಂಡಲವನ್ನೇ ನಡುಗಿಸಬಹುದು. ಮುಂದಿನ ಸರ್ಕಾರ ರಚನೆ ಮಾಡುವವರೆಗೂ ಪಕ್ಷ ಕಟ್ಟೋಣ, ಹೋರಾಟ ಮಾಡೋಣ. ಲೋಕಸಭಾ ಚುನಾವಣೆ ಗೆಲ್ಲೋಣ ಎಂದು ಕಾರ್ಯಕರ್ತರನ್ನ ಹುರಿದುಂಬಿಸಿದ್ದಾರೆ.
ನಂತರ ದಾಸರಹಳ್ಳಿ ಶಾಸಕ ಮುನಿರಾಜು ಭಾಷಣ ಮಾಡುತ್ತಿದ್ದ ವೇಳೆ ರೊಚ್ಚಿಗೆದ್ದ ಕಾರ್ಯಕರ್ತರು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗ್ತಿಲ್ಲ. ಕಾರ್ಯಕರ್ತರು ತಪ್ಪು ಮಾಡಿದಾಗ ಬುದ್ದಿ ಹೇಳ್ತೀರಾ, ಅದೇ ನಾಯಕರು ತಪ್ಪುಮಾಡಿದಾಗ ಯಾಕೆ ಬುದ್ದಿ ಹೇಳಲ್ಲ? ಹಿಂದೆ ಯಡಿಯೂರಪ್ಪ ಅವರನ್ನ ಕೆಳಗಿಳಿಸಿದಾಗ ಯಾಕೆ ನಾಯಕರು ಮಾತನಾಡಲಿಲ್ಲ? ಎಂದು ಗದ್ದಲ ಶುರು ಮಾಡಿದರು.
ಈ ವೇಳೆ ಕಾರ್ಯಕರ್ತರನ್ನ ಸಮಾಧಾನಪಡಿಸುವ ಪ್ರಯತ್ನ ಮಾಡಿದ ಮುನಿರಾಜು ಬೆನ್ನಿಗೆ ಚೂರಿ ಹಾಕಿದವರನ್ನ ಪಕ್ಷದಿಂದ ದೂರ ಇಡೋಣ, ಸಾಮಾನ್ಯ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡೋಣ ಎಂದು ಹೇಳಿದರು.