ಬೆಂಗಳೂರು: ಹಿಂದುಳಿದ ವರ್ಗಗಳ ಬಗೆಗಿನ ನಮ್ಮ ಸರ್ಕಾರಕ್ಕೆ ಇರುವ ಕಾಳಜಿ ಮತ್ತು ಬದ್ಧತೆಗೆ ನಾನು ಇಲ್ಲಿಯವರೆಗೆ ಮಂಡಿಸಿರುವ ಬಜೆಟ್ಗಳೇ ಸಾಕ್ಷಿ. ಸಾಮಾಜಿಕ ನ್ಯಾಯ ಎನ್ನುವುದು ರಾಜಕೀಯ ಅಸ್ತ್ರ ಅಲ್ಲ. ದಮನಿತರಿಗೆ ಅವಕಾಶ – ಪ್ರಾತಿನಿಧ್ಯಗಳನ್ನು ನೀಡುವ ಜವಾಬ್ದಾರಿ ಎಂದು ನಾನು ತಿಳಿದುಕೊಂಡಿದ್ದೇನೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಅವಶ್ಯಕ ಅನುದಾನ ನೀಡದೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದೇ ನಿರ್ಲಕ್ಷಿಸಿರುವುದು ವಿಷಾದನೀಯ ಬೆಳವಣಿಗೆ.
- ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರೆ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಅರಿವು ಎಂಬ ಯೋಜನೆಯ ಮುಖಾಂತರ ವಾರ್ಷಿಕ ಒಂದು ಲಕ್ಷ ರೂ.ಗಳ ಸಾಲವನ್ನು ಶೇ.2ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುತ್ತಿತ್ತು. ಇದರಿಂದ 11,956 ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ, ಈ ಕಾರ್ಯಕ್ರಮವನ್ನು ಹಿಂದಿನ ಸರ್ಕಾರವು 2020-21ನೇ ಸಾಲಿನಿಂದ ಸ್ಥಗಿತಗೊಳಿಸಿದ್ದು, ನಮ್ಮ ಸರ್ಕಾರವು ಪುನರ್ ಚಾಲನೆ ನೀಡಲಿದೆ.
- ವಿದ್ಯಾಸಿರಿ ಯೋಜನೆಯಡಿ ಸರ್ಕಾರದ ವಸತಿ ನಿಲಯಗಳಲ್ಲಿ ಪ್ರವೇಶ ದೊರಕದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗಾಗಿ ವಾರ್ಷಿಕ 15,000 ರೂ. ನೀಡಲಾಗುತ್ತಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 3.6 ಲಕ್ಷ ವಿದ್ಯಾರ್ಥಿಗಳಿಗೆ 432 ಕೋಟಿ ರೂ.ಗಳ ನೆರವು ನೀಡಲಾಗಿತ್ತು.
2021-22 ಮತ್ತು 2022-23ರಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದಿಲ್ಲ. ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಅನುಕೂಲವಾಗುವುದರಿಂದ ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸಲಾಗುವುದು.
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು 24 ಲಕ್ಷ ವಿದ್ಯಾರ್ಥಿಗಳಿಗೆ 881 ಕೋಟಿ ರೂ.ಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರವು 2020-21, 2021-22 ಮತ್ತು
2022-23ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸದೇ ನಿರ್ಲಕ್ಷಿಸಿದ್ದು, ಈ ಕಾರ್ಯಕ್ರಮವನ್ನು ನಮ್ಮ ಸರ್ಕಾರವು ಪುನರ್ ಪ್ರಾರಂಭಿಸಲಿದೆ.
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 17 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಿಂದಿನ ಸರ್ಕಾರವು ಈ ಕಾರ್ಯಕ್ರಮವನ್ನು 202೦-21, 2021-22 ಮತ್ತು 2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿರುವುದಿಲ್ಲ. ಈ ಕಾರ್ಯಕ್ರಮವನ್ನು ಕೂಡ ನಮ್ಮ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ.ಗಳ ಸಾಲ ಸೌಲಭ್ಯ ಒದಗಿಸುವ ಮೂಲಕ 10 ಕೋಟಿ ರೂ. ವೆಚ್ಚದಲ್ಲಿ ಮುಂದುವರೆಸಲಿದೆ.
- ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಲ್ಲಿದ್ದ ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ನಿಲಯಾರ್ಥಿಗಳಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ʻಶುಚಿ ಸಂಭ್ರಮ ಕಿಟ್ʼ ನೀಡಲಾಗುತ್ತಿತು. ಮೈಸೋಪು, ಬಟ್ಟೆ ಸೋಪು, ಟೂತ್ ಪೇಸ್ಟ್, ಕೊಬ್ಬರಿ ಎಣ್ಣೆ ಒಳಗೊಂಡ ಈ ಕಿಟ್ ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿತ್ತು. ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಯಲ್ಲಿ ಶುಚಿತ್ವದ ಪಾಠವನ್ನು ಬಾಲ್ಯದಿಂದಲೇ ಕಲಿಯಬೇಕು ಎನ್ನುವುದು ನಮ್ಮ ಸರ್ಕಾರದ ಆಶಯವಾಗಿತ್ತು. ಆದರೆ, ಹಿಂದಿನ ಸರ್ಕಾರವು 2020-21 ಮತ್ತು 2021-22 ಈ ಎರಡು ವರ್ಷಗಳಲ್ಲಿ ವಸತಿ ನಿಲಯಗಳಲ್ಲಿದ್ದ 3,31,712 ನಿಲಯಾರ್ಥಿಗಳಿಗೆ
ʻಶುಚಿ ಸಂಭ್ರಮ ಕಿಟ್ʼ ಗಳನ್ನು ನೀಡಿರುವುದಿಲ್ಲ. ನಮ್ಮ ಸರ್ಕಾರವು ಎಲ್ಲಾ ನಿಲಯಾರ್ಥಿಗಳಿಗೆ ಪ್ರತಿ ತಿಂಗಳು ನಿಯಮಿತವಾಗಿ
ʻಶುಚಿ ಸಂಭ್ರಮ ಕಿಟ್ʼ ಗಳನ್ನು ವಿತರಿಸಲಿದೆ.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 2,442 ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಇವುಗಳ ಸಮಗ್ರ ಬಲವರ್ಧನೆಗೆ ಕ್ರಮವಹಿಸಲಾಗುವುದು.
- ʻಸ್ವಾವಲಂಬಿ ಸಾರಥಿʼ ಯೋಜನೆಯಡಿ, ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು, ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು.
- ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲು ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆದಲ್ಲಿ ಶೇ.20 ರಷ್ಟು ಅಥವಾ ಗರಿಷ್ಠ ಒಂದು ಲಕ್ಷ ರೂ. ಗಳ ಸಾಲ ಸಹಾಯಧನವನ್ನು ವಾಣಿಜ್ಯ ಬ್ಯಾಂಕುಗಳ ಮುಖಾಂತರ ನೀಡಲಾಗುವುದು.
- ರಾಜ್ಯದ ಸೇವಾ ವಲಯದಲ್ಲಿ ಇರುವ ವಿಫುಲ ಅವಕಾಶಗಳನ್ನು ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ-2(ಎ) ಜಾತಿಗಳಿಗೆ ಸೇರಿದ ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಪಡೆಯುವ 10 ಕೋಟಿ ರೂ. ಗಳವರೆಗಿನ ಸಾಲಕ್ಕೆ ಶೇ.6 ರಷ್ಟು ಬಡ್ಡಿ ಸಹಾಯಧನವನ್ನು ನೀಡಲಾಗುವುದು.
- ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು
2000ನೇ ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸನ್ನು ಪರಿಶೀಲಿಸಿ, ಹಿಂದುಳಿದ ವರ್ಗಗಳ ಪ್ರವರ್ಗ-೧ ಮತ್ತು ಪ್ರವರ್ಗ-೨ಎ ನಲ್ಲಿ ಬರುವ ಜಾತಿಗಳಿಗೆ ಒಂದು ಕೋಟಿ ರೂ.ವರೆಗಿನ ನಿರ್ಮಾಣ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು.
- ಹಿಂದುಳಿದ ವರ್ಗಗಳಲ್ಲೇ ಅತ್ಯಂತ ಹಿಂದುಳಿದವರಾಗಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನವನ್ನು ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ ಮುಖಾಂತರ ಕೈಗೊಳ್ಳಲು ಎರಡು ಕೋಟಿ ರೂ.ಗಳ ಅನುದಾನವನ್ನು ನೀಡಲಾಗುವುದು.
ಅಲ್ಪಸಂಖ್ಯಾತರ ಕಲ್ಯಾಣ
- ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಈ ಸಮುದಾಯಗಳ ಜನರಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು (1 ರಿಂದ 8ನೇ ತರಗತಿಯವರೆಗೆ) ಕೇಂದ್ರ ಸರ್ಕಾರವು ಸ್ಥಗಿತಗೊಳಿಸಿರುತ್ತದೆ. ಇದರಿಂದ ಅಲ್ಪಸಂಖ್ಯಾತ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದನ್ನು ಮನಗಂಡು ನಮ್ಮ ಸರ್ಕಾರವು ಈ ಯೋಜನೆಯನ್ನು ಮುಂದುವರೆಸಲು 60 ಕೋಟಿ ರೂ. ಅನುದಾನವನ್ನು ಒದಗಿಸಲಿದೆ.
- ರಾಜ್ಯದ 62 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು 6ನೇ ತರಗತಿಯಿಂದ 12ನೇ ತರಗತಿಯವರೆಗೆ Integrated ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಇದರಿಂದ 13,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 30 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಇದಲ್ಲದೇ, 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿಯನ್ನು ದ್ವಿಗುಣಗೊಳಿಸುವ ಮೂಲಕ ಹೆಚ್ಚುವರಿಯಾಗಿ 12,500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು
23 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 10 ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
- ರಾಜ್ಯದಲ್ಲಿ 200 ಮೌಲಾನಾ ಆಜಾದ್ ಶಾಲೆಗಳಿದ್ದು, ಈ ಶಾಲೆಗಳಲ್ಲಿ ಶೇ.75 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ
22 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿರುತ್ತದೆ. ಮೌಲಾನಾ ಆಜಾದ್ ಶಾಲೆಗಳ ಉತ್ತಮ ಕಾರ್ಯನಿರ್ವಹಣೆಯನ್ನು ಗುರುತಿಸಿ, ಇವುಗಳ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ಸ್ವಂತ ಕಟ್ಟಡ ಇಲ್ಲದೇ ಇರುವ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು.
- ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ಸಿ.ಇ.ಟಿ ಮೂಲಕ ಪ್ರವೇಶ ಪಡೆದ ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ 28 ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡಲು ಶೇ.2 ರ ಬಡ್ಡಿ ದರದಲ್ಲಿ ವಾರ್ಷಿಕ ಒಂದು ಲಕ್ಷ ರೂ.ಗಳವರೆಗೆ ಸಾಲ ಮಂಜೂರು ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ 75 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು.
- ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಕನ್ನಡ ಮತ್ತು ಆಂಗ್ಲ ಭಾಷಾ ಜ್ಞಾನವನ್ನು ಉತ್ತಮಪಡಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಭಾಷಾ ಪ್ರಯೋಗಾಲಯಗಳನ್ನು ಐದು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
- ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಯುವಜನರಿಗೆ ಕೌಶಲ್ಯ ತರಬೇತಿಯನ್ನು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
- ಅಲ್ಪಸಂಖ್ಯಾತರ ಪದವಿ ಪೂರ್ವ ವಸತಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದಿಂದಲೇ NEET, JEE, CET ಹಾಗೂ ಇತರೆ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ಎರಡು ವರ್ಷಗಳ ತರಬೇತಿಯನ್ನು ನೀಡಲು ಎಂಟು ಕೋಟಿ ರೂ.ಗಳ ಅನುದಾನ ನೀಡಲಾಗುವುದು.
- ಬೆಂಗಳೂರು ನಗರದಲ್ಲಿ ನಿರ್ಮಿಸಿರುವ ಹಜ಼್ ಭವನದಲ್ಲಿ ಅಲ್ಪಸಂಖ್ಯಾತರ ಯುವ ಜನರಿಗೆ 10 ತಿಂಗಳ ವಸತಿಸಹಿತ IAS/KAS ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಳನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಪ್ರಾರಂಭಿಸಲಾಗುವುದು.
- ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ 250 ರೊಳಗೆ University Ranking ಹೊಂದಿರುವ ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ಸಾಲ ಸೌಲಭ್ಯ ಒದಗಿಸಲಾಗುವುದು.
- ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 10,000 ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅವಕಾಶವನ್ನು ಕಲ್ಪಿಸುವ ಸಲುವಾಗಿ ಇವರುಗಳಿಗೆ ಬ್ಯಾಂಕ್ಗಳಿಂದ ಪಡೆಯುವ ಸಾಲ ಮೊತ್ತದ ಶೇ. 20 ರಷ್ಟು ಅಥವಾ ಗರಿಷ್ಠ ಒಂದು ಲಕ್ಷ ರೂ.ವರೆಗೆ ಸಹಾಯಧನವನ್ನು ನೀಡಲಾಗುವುದು.
- ʻಸ್ವಾವಲಂಬಿ ಸಾರಥಿʼ ಯೋಜನೆಯಡಿ, ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50 ರಷ್ಟು, ಗರಿಷ್ಠ 3 ಲಕ್ಷ ರೂ.ಗಳ ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು.
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ರಾಜ್ಯಾದ್ಯಂತ ನೂರಾರು ಶಾದಿ ಮಹಲ್ ಮತ್ತು ಸಮುದಾಯ ಭವನಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿತ್ತು. ಆದರೆ, ನಂತರದ ದಿನಗಳಲ್ಲಿ
ಈ ಭವನಗಳನ್ನು ಪೂರ್ಣಗೊಳಿಸಿರುವುದಿಲ್ಲ. ಅಂತಹ
126 ಶಾದಿ ಮಹಲ್ ಮತ್ತು ಸಮುದಾಯ ಭವನಗಳ ನಿರ್ಮಾಣ ಕಾರ್ಯಗಳನ್ನು 54 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು.
- ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಕರ್ನಾಟಕ ಇನಾಮ್ ರದ್ದಿಯಾತಿ ಅಧಿನಿಯಮದನ್ವಯ ನೀಡಲಾಗುತ್ತಿರುವ ತಸ್ತಿಕ್ ಮೊತ್ತವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಲಾಗುವುದು. ಇದರಿಂದ ತಸ್ತಿಕ್ ಪಡೆಯುತ್ತಿರುವ 868 ಸಂಸ್ಥೆಗಳಿಗೆ ಅನುಕೂಲವಾಗಲಿದೆ.
- ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಮತ್ತು ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪ್ರಸಕ್ತ ಸಾಲಿನಲ್ಲಿ 36೦ ಕೋಟಿ ರೂ.ಗಳನ್ನು ಮೀಸಲಿಡಲಾಗುವುದು.
- ಜೈನರ ಪ್ರಮುಖ ಪುಣ್ಯಕ್ಷೇತ್ರಗಳ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು.
- ನಾಡಿನ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಅನುದಾನ ನೀಡಲಾಗುವುದು.
- ರಾಜ್ಯದಲ್ಲಿ ೪೦,೦೦೦ ಕ್ಕಿಂತಲೂ ಅಧಿಕ ವಕ್ಛ್ ಆಸ್ತಿಗಳಿದ್ದು, ಇವುಗಳ ಸಂರಕ್ಷಣೆ ಮತ್ತು ಅಭಿವೃದ್ದಿಗಾಗಿ ೨೦೨೩-೨೪ನೇ ಸಾಲಿನಲ್ಲಿ
೫೦ ಕೋಟಿ ರೂ. ಒದಗಿಸಲಾಗುವುದು.
- ಹಲಸೂರಿನಲ್ಲಿರುವ ಗುರುದ್ವಾರದ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ನೀಡಲಾಗಿದೆ. ಅದೇ ಮಾದರಿಯಲ್ಲಿ ಮೈಸೂರು, ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿರುವ ಗುರುದ್ವಾರಗಳ ಅಭಿವೃದ್ಧಿಗೆ ಐದು ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಗುರುದ್ವಾರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಿಗಳಿಗೆ ಅವರ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಮಾಸಿಕ ಗೌರವ ಧನ ನೀಡಲಾಗುವುದು.
ವಸತಿ
- 2013 ರಿಂದ 2018ರ ಅವಧಿಯಲ್ಲಿ ನಮ್ಮ ಸರ್ಕಾರವು 14.54 ಲಕ್ಷ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಿ ಬಡ ಜನರಿಗೆ ಸೂರು ಕಲ್ಪಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, 2019 ರಿಂದ 2023ರ ಅವಧಿಯಲ್ಲಿ ಕೇವಲ 5.19 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಲಾಗಿರುತ್ತದೆ. ಮಾರ್ಚ್ 2023ಕ್ಕೆ ಬಾಕಿ ಉಳಿದಿರುವ 12 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಪೂರ್ಣಗೊಳಿಸಬೇಕಾದರೆ 17,815 ಕೋಟಿ ರೂ.ಗಳ ಅಗತ್ಯವಿರುತ್ತದೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ ಮೂರು ಲಕ್ಷ ಮನೆಗಳನ್ನು ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲು ಕ್ರಮವಹಿಸಲಾಗುವುದು. ಇದಕ್ಕಾಗಿ 2,450 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ಬೆಂಗಳೂರು ಮಹಾನಗರದಲ್ಲಿ ಬಡವರಿಗೆ ಸೂರು ನೀಡುವ ಉದ್ದೇಶದೊಂದಿಗೆ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆಗಳ ಯೋಜನೆಯು 2017-18ರಲ್ಲಿ ಅನುಮೋದನೆಗೊಂಡರೂ ಸಹ ಹಿಂದಿನ ಸರ್ಕಾರವು ಈ ಮನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿರುವುದಿಲ್ಲ. ಈ ಯೋಜನೆಯಡಿಯಲ್ಲಿನ ಫಲಾನುಭವಿಗಳ ಆಯ್ಕೆ ಕೂಡ ಸಮರ್ಪಕವಾಗಿ ನಡೆಸಿರುವುದಿಲ್ಲ. ಈ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ ಮುಂದಿನ ವರ್ಷಗಳಲ್ಲಿ ಅನುಷ್ಠಾನಗೊಳಿಸುವ ಮೂಲಕ ಬೆಂಗಳೂರು ನಗರದ ಬಡಜನರಿಗೆ ಕೈಗೆಟುಕುವ ದರದಲ್ಲಿ ಮನೆಗಳನ್ನು ಲಭ್ಯಪಡಿಸಲು ನಮ್ಮ ಸರ್ಕಾರವು ಬದ್ಧವಾಗಿದೆ.
- ವಸತಿ ಸಮಸ್ಯೆಗೆ ತೊಡಕಾಗಿರುವ ಅರಣ್ಯ ಕಾಯ್ದೆ ವಿಧಿಗಳ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು
- ʻಅನ್ನ ದೇವರಿಗಿಂತ ಇನ್ನು ದೇವರು ಇಲ್ಲʼ ಎಂಬ ಸರ್ವಜ್ಞ ಕವಿವಾಣಿಯಂತೆ ಅನ್ನದ ಬೆಲೆ ಹಸಿದವರಿಗೆ ಮಾತ್ರ ತಿಳಿದಿರುತ್ತದೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರ 2013 ರಲ್ಲಿ ʻಅನ್ನ ಭಾಗ್ಯ ಯೋಜನೆʼ ಜಾರಿಗೊಳಿಸಿತು. ಆದರೆ, ಹಿಂದಿನ ಸರ್ಕಾರ ಈ ಯೋಜನೆಯಡಿ ನೀಡಲಾಗುವ ಧಾನ್ಯದ ಪ್ರಮಾಣ ಕಡಿತಗೊಳಿಸಿತ್ತು. ಇದೀಗ ನಮ್ಮ ಸರ್ಕಾರ ಮತ್ತೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ ಒದಗಿಸುತ್ತಿರುವ ಐದು ಕೆ.ಜಿ. ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಒದಗಿಸುವ ಹೆಚ್ಚುವರಿ ಐದು ಕೆ.ಜಿ. ಸೇರಿದಂತೆ ಒಟ್ಟಾರೆ ೧೦ ಕೆ.ಜಿ. ಆಹಾರ ಧಾನ್ಯವನ್ನು
ಪ್ರತಿ ತಿಂಗಳು ವಿತರಿಸಲು ನಾವು ಬದ್ಧರಾಗಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡುವ ಮೂಲಕ ಬಡವರ ಅನ್ನ ಕಸಿಯುವ ಕೆಲಸ ಮಾಡುತ್ತಿರುವುದು ದುರದೃಷ್ಟಕರ ಹಾಗೂ ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುವಂತಹ ಬೆಳವಣಿಗೆ. ಶೀಘ್ರವೇ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿ, ಲಭ್ಯವಿರುವ ಆಹಾರ ಧಾನ್ಯವನ್ನು ಬಡವರಿಗೆ ಹಂಚಲು ಅನುವು ಮಾಡಿಕೊಡುವುದು ಎಂಬ ಆಶಯ ನಮ್ಮದು. ನಾವು ನೀಡಿರುವ ಭರವಸೆಯಂತೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದೇವೆ. ಭತ್ತ ಬೆಳೆಯುವ ವಿವಿಧ ರಾಜ್ಯಗಳನ್ನು ಸಂಪರ್ಕಿಸಿದ್ದು, ಅಕ್ಕಿ ಖರೀದಿಸಲು ಮಾತುಕತೆ ನಡೆಸುತ್ತಿದ್ದೇವೆ. ಅಲ್ಲಿಯವರೆಗೂ ಪ್ರತಿ ಕಿಲೋ ಆಹಾರ ಧಾನ್ಯಕ್ಕೆ ವೆಚ್ಚವಾಗುವ ಮೊತ್ತವನ್ನು ಜುಲೈ ತಿಂಗಳಿನಿಂದಲೇ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗುವುದು. ಇದರಿಂದ ಫಲಾನುಭವಿಗಳು ಮಾರುಕಟ್ಟೆಯಿಂದ ಧಾನ್ಯಗಳನ್ನು ಖರೀದಿಸಬಹುದು. ನಾವು ಯಾವುದೇ ಕಾರಣಕ್ಕೂ ನೀಡಿರುವ ವಾಗ್ದಾನದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಸದನದಲ್ಲಿ ಸ್ಪಷ್ಟಪಡಿಸುತ್ತೇನೆ.
- ಅನ್ನಭಾಗ್ಯ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕೆ ವರ್ಷಕ್ಕೆ ಸುಮಾರು 10,000 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗುವುದು.
- ರಾಜ್ಯ ಸರ್ಕಾರವು ಗುರುತಿಸಿರುವ ಸುಮಾರು 40 ಲಕ್ಷ ಬಡತನ ರೇಖೆಗಿಂತ ಕೆಳಗಿರುವ ಫಲಾನುಭವಿಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡದೇ ಇರುವುದರಿಂದ ಅವರಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ 10 ಕೆ.ಜಿ. ಆಹಾರ ಧಾನ್ಯಗಳನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರದ ವತಿಯಿಂದ ಖರೀದಿಸಿ ವಿತರಿಸಲು ವಾರ್ಷಿಕ 1,680 ಕೋಟಿ ರೂ. ಭರಿಸಲಾಗುವುದು. ಕೇಂದ್ರ ಸರ್ಕಾರವು ಈ ಹೆಚ್ಚುವರಿ ಬಡ ಕುಟುಂಬಗಳನ್ನೂ ಸಹ ಆದ್ಯತಾ ವಲಯದಡಿ ಪರಿಗಣಿಸಿ ಸೌಲಭ್ಯಗಳನ್ನು ವಿಸ್ತರಿಸಬೇಕೆಂದು ಸದನದ ಮೂಲಕ ಒತ್ತಾಯಿಸುತ್ತೇನೆ.
ಕಾರ್ಮಿಕ
ʻಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ,
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು
ಕಡಿದಲ್ಲವರ್ಗೆ ಬಾಳ್ – ಮಂಕುತಿಮ್ಮʼ
– ಡಿ.ವಿ.ಜಿ.
- ಕೋವಿಡ್ ಸಾಂಕ್ರಾಮಿಕದ ಅಸಮರ್ಥ ನಿರ್ವಹಣೆ, ಹಿಂದಿನ ಸರ್ಕಾರದ ಕಾರ್ಮಿಕ ವಿರೋಧಿ ನಿಲುವುಗಳು ಕಾರ್ಮಿಕರ ಬದುಕನ್ನು ದುಸ್ತರಗೊಳಿಸಿತ್ತು. ದುಡಿಮೆಯ ಬೆವರಿಗೆ ಗೌರವ ಕೊಡುವ ಸರ್ಕಾರ ನಮ್ಮದು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಮಿಕ ಸ್ನೇಹಿ ವಾತಾವರಣ ನಿರ್ಮಿಸಿ, ಅವರ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಗೆ ಒತ್ತು ನೀಡಲಿದೆ.
- ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ
ʻGig workersʼ, ಅಂದರೆ ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಮುಂತಾದ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ, ಇಂತಹವರಿಗೆ ಎರಡು ಲಕ್ಷ ರೂ.ಗಳ ಜೀವವಿಮಾ ಸೌಲಭ್ಯ ಹಾಗೂ ಎರಡು ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ.ಗಳ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಮತ್ತು ಇದರ ಸಂಪೂರ್ಣ ವಿಮಾ ಕಂತನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು.
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಫಲಾನುಭವಿಗಳು ಮತ್ತು ಅವಲಂಬಿತರಿಗೆ ಸಹಾಯಧನ ಹಾಗೂ ಸೌಲಭ್ಯಗಳನ್ನು ವಿತರಿಸಲಾಗುವುದು. ಇದುವರೆವಿಗೂ ನೋಂದಣಿಯಾಗದೇ ಇರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ನೋಂದಾಯಿಸಲು ಕ್ರಮ ವಹಿಸಲಾಗುವುದು.
- ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ವ್ಯವಹಾರ ಸರಳೀಕರಣ ಪರಿಕ್ರಮಗಳಡಿಯಲ್ಲಿ ಇಲಾಖೆಯ ಎಲ್ಲಾ ಸೇವೆಗಳನ್ನು ಭಾಗೀದಾರರಿಗೆ ಸಮರ್ಪಕವಾಗಿ ಮತ್ತು ಸಕಾಲದಲ್ಲಿ ಸಂಪೂರ್ಣವಾಗಿ ಆನ್-ಲೈನ್ ಮೂಲಕ ಒದಗಿಸಲಾಗುವುದು.
- ಆರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ (ESIC) ಒಟ್ಟು
35 ಬೆಡ್ಗಳ ಸಾಮರ್ಥ್ಯದ ಐ.ಸಿ.ಯು/ಎಂ.ಐ.ಸಿ.ಯು ಗಳನ್ನು
13 ಕೋಟಿ ರೂ. ವೆಚ್ಚದಲ್ಲಿ, ಆರು ಆಸ್ಪತ್ರೆಗಳಲ್ಲಿ 25 ಡಯಾಲಿಸಿಸ್ ಘಟಕಗಳನ್ನು ಐದು ಕೋಟಿ ರೂ. ವೆಚ್ಚದಲ್ಲಿ, ಎರಡು ಆಸ್ಪತ್ರೆಗಳಲ್ಲಿ ಹೊಸ ಲೆವೆಲ್-೨ ಟ್ರಾಮಾ ಕೇರ್ ಸೆಂಟರ್ಗಳನ್ನು 24 ಕೋಟಿ ರೂ. ವೆಚ್ಚದಲ್ಲಿ, ನಾಲ್ಕು ಆಸ್ಪತ್ರೆಗಳಲ್ಲಿ ಮಾಡ್ಯುಲಾರ್ ಓ.ಟಿ. ಗಳನ್ನು ಎಂಟು ಕೋಟಿ ರೂ. ವೆಚ್ಚದಲ್ಲಿ ಮತ್ತು ರೋಗ ಪತ್ತೆ ಹಚ್ಚುವ ಕೇಂದ್ರಗಳ ಉನ್ನತೀಕರಣವನ್ನು 35 ಕೋಟಿ ರೂ. ವೆಚ್ಚದಲ್ಲಿ ಸೇರಿದಂತೆ ಒಟ್ಟು 85 ಕೋಟಿ ರೂ. ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
- ರಾಜ್ಯದಲ್ಲಿನ ಎಲ್ಲಾ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ ಆಯುರ್ವೇದ, ಹೋಮಿಯೋಪಥಿ ಮತ್ತು ಯೋಗ ಕೇಂದ್ರಗಳು ಒಳಗೊಂಡ ಆಯುಷ್ ವಿಭಾಗವನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ.
- ಶಿಕ್ಷಣ ಪಡೆದು ಉದ್ಯೋಗ ಹಿಡಿದು ಜೀವನದಲ್ಲಿ ಉನ್ನತಿಯನ್ನು ಸಾಧಿಸುವ ಕನಸು ಹೊಂದಿರುವ ಯುವಜನರು, ನಿರೀಕ್ಷೆಯಂತೆ ಉದ್ಯೋಗ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಆಶಯದೊಂದಿಗೆ ನಮ್ಮ ಪ್ರಣಾಳಿಕೆಯ
ಐದನೇ ಗ್ಯಾರಂಟಿ ಯೋಜನೆಯಾದ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ನೀಡುವ ʻಯುವನಿಧಿʼ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ನಾಡಿನ ಯುವಜನರು ಅಡ್ಡದಾರಿ ಹಿಡಿಯದಂತೆ, ಅತ್ಮಸ್ತೈರ್ಯದಿಂದ ತಮ್ಮ ಬದುಕಿನಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಮಯಾವಕಾಶ, ಆರ್ಥಿಕ ನೆರವನ್ನು ನೀಡುವುದು, ಆತ್ಮವಿಶ್ವಾಸವನ್ನು ತುಂಬುವುದು
ಈ ಯೋಜನೆಯ ಉದ್ದೇಶವಾಗಿದೆ. ಡಬಲ್ ಎಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರಗಳ ಜನವಿರೋಧಿ ನೀತಿಯಿಂದ ಆರ್ಥಿಕತೆ ಕುಸಿದಿದ್ದು, ನಿರುದ್ಯೋಗ ಸಮಸ್ಯೆ ರಾಜ್ಯದೆಲ್ಲೆಡೆ ತಾಂಡವವಾಡುತ್ತಿದೆ. 2023 ರಲ್ಲಿ ಪದವಿ ಪಡೆದು ಆರು ತಿಂಗಳವರೆಗೂ ಉದ್ಯೋಗ ಲಭಿಸದ ಯುವಜನರಿಗೆ ಎರಡು ವರ್ಷದವರೆಗೆ ಅಥವಾ ಉದ್ಯೋಗ ಸಿಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಪದವೀಧರರಿಗೆ ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಅನುಕ್ರಮವಾಗಿ ಮಾಸಿಕ 3,000 ರೂ. ಮತ್ತು 1,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
- ರಾಜ್ಯದಲ್ಲಿ 50 ವರ್ಷಗಳನ್ನು ಪೂರೈಸಿದ 12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೋಷಿಸಿ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ನಿರ್ಮಾಣ ಕಾರ್ಯ ಹಾಗೂ ಹೊಸ ಉಪಕರಣಗಳು ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 100 ಕೋಟಿ ರೂ.ಗಳನ್ನು ವಿನಿಯೋಗಿಸಲು ಉದ್ದೇಶಿಸಲಾಗಿದೆ.
- ಕೌಶಲ್ಯಾಭಿವೃದ್ಧಿ ಇಲಾಖೆಯಡಿಯಲ್ಲಿ ಇದುವರೆಗೂ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಎಲ್ಲಾ ಕೌಶಲ್ಯ ತರಬೇತಿಯನ್ನು ನಮ್ಮ ITI, GTTC, Polytechnic ಸಂಸ್ಥೆಗಳ ಮೂಲಕವೇ ನೀಡಿ, Industry ಮತ್ತು Academy ಯನ್ನು ಸಮನ್ವಯಗೊಳಿಸಿ ಕೌಶಲ್ಯ ತರಬೇತಿಯನ್ನು ಹೆಚ್ಚಿನ ಸಾಂಸ್ಥೀಕರಣ ಹಾಗೂ ವ್ಯವಸ್ಥೀಕರಣಗೊಳಿಸಲಾಗುವುದು