ಬೆಂಗಳೂರು: ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮತಾಂಧ ಶಕ್ತಿಗಳನ್ನು ಬೆಳೆಸುವ ಕೆಲಸ ಮಾಡ್ತಿದೆ. ಒಂದೇ ವರ್ಷದಲ್ಲಿ ಈ ನಾಡನ್ನ ಮತಾಂಧರ ಯುದ್ಧಭೂಮಿಯನ್ನಾಗಿ ಮಾಡಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಡಿ.ವಿ ಸದಾನಂದಗೌಡ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್ವೈ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಕೊಲೆಯಾಗಿದೆ, ತಮ್ಮದೇ ಪಕ್ಷದ ಚುನಾಯಿತ ಪ್ರತಿನಿಧಿಗೆ ನ್ಯಾಯ ಒದಗಿಸುವುದು ಬಿಟ್ಟು ಆರೋಪಿ ಪರ ಸರ್ಕಾರ ನಿಂತಿದೆ ಎಂದು ಕಿಡಿ ಕಾರಿದರು. ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ್ದಾರೆ. ಉಡುಪಿ ಹಾಸ್ಟೆಲ್ ವಿಡಿಯೋ ಪ್ರಕರಣ ತಾರ್ಕಿಕ ಅಂತ್ಯ ಮುಟ್ಟಿಲ್ಲ,
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಯಾವ ಕ್ರಮಗಳೂ ಆಗಿಲ್ಲ. ಹೆಣ್ಣು ಮಕ್ಕಳು ರಾಜ್ಯದಲ್ಲಿ ಭಯದಿಂದ ಬದುಕುವ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಆಡಳಿತ ವೈಖರಿ ಎಲ್ಲರಿಗೂ ತಿಳಿದಿದೆ. ಸಿದ್ದರಾಮಯ್ಯ ಸರ್ಕಾರದ ಆದ್ಯತೆಗಳೇನು ಅಂತ ಇದರಿಂದ ಗೊತ್ತಾಗುತ್ತೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ರೈತರು, ವಿದ್ಯಾರ್ಥಿಗಳು, ಮಹಿಳೆಯರ ಬದುಕಿಗೆ ಗ್ಯಾರಂಟಿ ಇಲ್ಲದಂತಾಗಿದೆ. ಭಯೋತ್ಪಾದಕರಿಗೆ, ದರೋಡೆಕೋರರಿಗೆ, ಹಲ್ಲೆಕೋರರಿಗೆ ಈ ಸರ್ಕಾರ ಗ್ಯಾರಂಟಿ ಕೊಟ್ಟಿದೆ ಅನ್ನೋದು ಸ್ಪಷ್ಟವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.