ಮಲಯಾಳಂನಲ್ಲಿ ಜಸ್ಟೀಸ್ ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿಸಿದೆ. ಚಿತ್ರರಂಗದಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತು ಹೇಮಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯ ಬಳಿಕ ಸಾಕಷ್ಟು ಮಂದಿಯ ತಲೆದಂಡವಾಗಿದೆ. ಹೇಮಾ ವರದಿಯಂತೆ ಇತರ ಭಾಷೆಗಳ ಚಿತ್ರರಂಗದಲ್ಲೂ ವರದಿಗಳು ಜಾರಿಯಾಗಬೇಕು ಎಂದು ಸಾಕಷ್ಟು ಮಂದಿ ಮಾತನಾಡಿದ್ದಾರೆ. ಇದೀಗ ನಟಿ ಶೃತಿ ಹರಿಹರನ್ ಕೂಡ ಹೇಮಾ ಸಮಿತಿ ಮಾದರಿಯಲ್ಲಿ ಸ್ಯಾಂಡಲ್ ವುಡ್ ನಲ್ಲೂ ಸಮಿತಿ ಆಗಬೇಕು ಎಂದಿದ್ದಾರೆ.
‘ಹೇಮಾ ಸಮಿತಿಯ ವರದಿ ಬಗ್ಗೆ ತುಂಬಾನೇ ಗೌರವ ಇದೆ. ಇಷ್ಟು ದಿನಗಳಿಂದ ಈ ಬಗ್ಗೆ ನಾವು ಇದನ್ನು ಮುಚ್ಚುಮರೆಯಲ್ಲಿ ಮಾತನಾಡುತ್ತಿದ್ದೆವು. ಸೆಕ್ಷುವಲ್ ಫೇವರ್ ಅತಿಯಾಗಿದೆ ಎಂದು ಹೇಳುತ್ತಿದ್ದೆವು. ಈ ವಿಚಾರವನ್ನು ಆಪ್ತ ಬಳಗದಲ್ಲಿ ಕೆಲವರು ಜೋಕ್ ಕೂಡ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ’ ಎಂದು ಶೃತಿ ಹರಿಹರನ್ ಹೇಳಿದ್ದಾರೆ.
‘ಹೇಮಾ ವರದಿ ಮಲಯಾಳಂ ಚಿತ್ರರಂಗದ ಗೌರವ ಕಡಿಮೆ ಮಾಡುತ್ತಿದೆ, ಮಲಯಾಳಂ ಚಿತ್ರರಂಗದ ಘನತೆಗೆ ಧಕ್ಕೆ ತಂದಿದೆ’ ಎಂದು ಮಾತನಾಡಿಕೊಂಡಿದ್ದೂ ಇದೆ. ಆದರೆ, ಇದನ್ನು ಶ್ರುತಿ ಹರಿಹರನ್ ತಪ್ಪು ಎಂದಿದ್ದಾರೆ. ‘ಇದು ಖಂಡಿತವಾಗಿಯೂ ತಪ್ಪು. ಆ ರೀತಿ ನೋಡಬಾರದು. ಸಿನಿಮಾ ಕಲೆಗೆ ಸಂಬಂಧಿಸಿದ್ದು. ಅದರೊಳಗೆ ಇರುವ ಕೆಲವ ವಿಚಾರಗಳನ್ನು ಸ್ವಚ್ಛ ಮಾಡಲು ಇದು ಸರಿಯಾದ ಸಮಯ. ನಮ್ಮ ಮನೆಯನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದಿದ್ದಾರೆ ಶ್ರುತಿ ಹರಿಹರನ್.
ಇತ್ತೀಚೆಗೆ ಹೇಮಾ ವರದಿಯ ಕುರಿತು ಮಾತನಾಡಿದ್ದ ನಟಿ ಸಮಂತಾ ತೆಲುಗು ಚಿತ್ರರಂಗದಲ್ಲೂ ಈ ರೀತಿಯ ಸಮಿತಿಯ ಅಗತ್ಯವಿದೆ ಎಂದಿದ್ದರು. ಇದೀಗ ಕನ್ನಡದ ನಟಿ ಶೃತಿ ಹರಿಹರನ್ ಕೂಡ ಸ್ಯಾಂಡಲ್ ವುಡ್ ನಲ್ಲೂ ಹೇಮಾ ಸಮಿತಿಯಂತೆ ಸಮಿತಿ ರಚನೆ ಆಗಬೇಕು ಎಂದಿದ್ದಾರೆ.