ಧಾರವಾಡ: ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ. ಪ್ರಹ್ಲಾದ ಜೋಶಿ, ಬಿ.ಎಲ್.ಸಂತೋಷ ಯಾರೂ ಸಿಎಂ ಆಗುವುದಿಲ್ಲ. ಎರಡನೇ ಜನರೇಶನ್ನಿನ ಲಿಂಗಾಯತ ವ್ಯಕ್ತಿಯೇ ಸಿಎಂ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.
ನವಲಗುಂದದಲ್ಲಿ ಮಾತನಾಡಿದ ಅವರು, ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷ ತೊರೆದಿದ್ದಾರೆ. ಇಷ್ಟು ವರ್ಷ ಬಿಜೆಪಿಯಲ್ಲಿ ಸುಖ, ಸಂತೋಷ ಅನುಭವಿಸಿ ಹೋಗಿದ್ದಾರೆ. ಇದು ದುರದೃಷ್ಟಕರ. ಈ ದೇಶಕ್ಕೆ ನರೇಂದ್ರ ಮೋದಿ ಬೇಕಾಗಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರ ಬೇಕಿದೆ. ಯಾರೇ ಪಕ್ಷ ಬಿಟ್ಟು ಹೋದರೂ ಬಿಜೆಪಿ ಸ್ಪಷ್ಟ ಬಹುಮತ ಬರುವುದು ಗ್ಯಾರಂಟಿ ಎಂದರು.
ಬಿಜೆಪಿಗೆ ಹೊಸ ನಾಯಕತ್ವ ಬರುವುದಿದೆ. ಎರಡನೇ ಸಾಲಿನ ನಾಯಕತ್ವ ಬರಲಿದೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರು ಬಿಜೆಪಿಯಲ್ಲಿದ್ದೇವೆ. ಲಿಂಗಾಯತರಿಗೆ ಅನ್ಯಾಯ ಆಗಿದೆ ಅನ್ಯಾಯ ಆಗಿದೆ ಎನ್ನುತ್ತಾರೆ ಯಾವುದೂ ಅನ್ಯಾಯ ಆಗಿಲ್ಲ. ಶೆಟ್ಟರ್ ಅವರು ಎಂಎಲ್ಎ, ಮಂತ್ರಿ, ಸಿಎಂ, ಸ್ಪೀಕರ್, ಡಿಸಿಎಂ ಆಗಿ ಸುಖ ಉಂಡಿದ್ದಾರೆ. ದುಡಿಯಲಾತದೇ ದುಃಖ ಪಡಲಾರದೇ ಸುಖ ಉಂಡಿದ್ದಾರೆ. ಪಕ್ಷ ಬಿಟ್ಟು ಹೋಗುವವರು ಹೋಗಿದ್ದಾರೆ. ಈಗ ಎಲ್ಲವೂ ನಮ್ಮ ಕೈಯಲ್ಲಿ ಬರುವುದಿದೆ ಎಂದರು.
ಪ್ರಹ್ಲಾದ ಜೋಶಿ ಅವರು ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದಿದ್ದಾರೆ. ನಾನು ಸಿಎಂ ರೇಸ್ನಲ್ಲಿ ಇದ್ದೇನೆ ಎಂದು ಹೇಳಲಾರೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿಯವರೇ ಸಿಎಂ ಆಗುತ್ತಾರೆ. ಬೀಗರೆಲ್ಲರೂ ಒಂದೇ ಪಕ್ಷದಲ್ಲಿ ಸೇರ್ಪಡೆಗೊಂಡಿದ್ದಾರೆ. ಶೆಟ್ಟರ್, ಶ್ಯಾಮನೂರು, ಎಂ.ಬಿ.ಪಾಟೀಲ ಇವರೆಲ್ಲ ಬೀಗರು. ಇವರೆಲ್ಲ ಒಂದೇ ಪಕ್ಷದಲ್ಲಿದ್ದಾರೆ. ಬೇರೆ ಬೇರೆ ಪಕ್ಷದಲ್ಲಿದ್ದಾಗ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದರು. ಈಗ ಒಂದೇ ಪಕ್ಷದಲ್ಲಿದ್ದಾರೆ ಎಂದರು.