ಜೈಪುರ: ಪ್ರೇಮಿಗಳಿಗೆ (Lovers) ಜಗತ್ತೇ ಕುರುಡಾಗಿರುತ್ತದೆ. ಕೆಲ ಪ್ರೇಮಿಗಳಂತೂ ಅಕ್ಕ-ಪಕ್ಕ ಯಾರಿರುತ್ತಾರೆ ಎಂಬ ಅರಿವೇ ಇಲ್ಲದೇ ಸಾರ್ವಜನಿಕ ಪ್ರದೇಶಗಳಲ್ಲೂ ಹುಚ್ಚಾಟ ಮರೆಯುವುದನ್ನು ನೋಡಿರುತ್ತೇವೆ. ಅದೇ ರೀತಿ ಪ್ರೇಮಿಗಳಿಬ್ಬರು ಹಾಡಹಗಲೇ ನಡುರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ರೊಮ್ಯಾನ್ಸ್ ಮಾಡಿಕೊಂಡು ಚಲಿಸುತ್ತಿರುವ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.
ರಾಜಸ್ಥಾನದ (Rajasthan) ಜೈಪುರದಲ್ಲಿ ಯುವ ಪ್ರೇಮಿಗಳಿಬ್ಬರು ಹಾಡಹಗಲೇ ಬೈಕ್ ಮೇಲೆ ರಾಜಾರೋಷವಾಗಿ ತಬ್ಬಿಕೊಂಡು ಹೋಗುತ್ತಿದ್ದಾರೆ, ಈ ವೇಳೆ ಯುವಕ ಹಿಂಬದಿಗೆ ತಿರುಗಿ ಪರಸ್ಪರ ಲಿಪ್ಲಾಕ್ ಮಾಡಿ ಚುಂಬಿಸಿದ್ದಾರೆ. ಈ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದಂತೆ ಜೈಪುರದ ಸಂಚಾರ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.
ಬೈಕ್ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ, ಜೊತೆಗೆ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂದು ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಮೋಟಾರು ವಾಹನ ಕಾಯ್ದೆ (ಎಂವಿ)-1988 (Motor Vehicle Act-1988) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕನಿಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.