ಅಲಹಾಬಾದ್: ಲಿವ್ ಇನ್ ರಿಲೇಷನ್ಶಿಪ್ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಲಹಾಬಾದ್ ಹೈಕೋರ್ಟ್, ಇದು “ಭಾರತದಲ್ಲಿನ ವೈವಾಹಿಕ ಪದ್ಧತಿಯನ್ನು ನಾಶಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ವ್ಯವಸ್ಥಿತ ತಂತ್ರ” ಎಂದು ಹೇಳಿದೆ. ತನ್ನ ಲಿವ್ ಇನ್ ಸಂಗಾತಿಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
“ಮದುವೆ ಆಚರಣೆಯು ವ್ಯಕ್ತಿಗೆ ಒದಗಿಸುವ ಭದ್ರತೆ, ಸಾಮಾಜಿಕ ಸ್ವೀಕೃತಿ ಹಾಗೂ ಸ್ಥಿರತೆಯನ್ನು ಎಂದಿಗೂ ಲಿವ್ ಇನ್ ಸಂಬಂಧ ಒದಗಿಸುವುದು ಸಾಧ್ಯವಿಲ್ಲ” ಎಂದು ನ್ಯಾ ಸಿದ್ಧಾರ್ಥ್ ಅವರ ಏಕ ಸದಸ್ಯ ಪೀಠ ಹೇಳಿದೆ. “ಪ್ರತಿ ಕಾಲಮಾನಕ್ಕೂ ಸಂಗಾತಿಯನ್ನು ಬದಲಿಸುವ ಬ್ರಿಟಿಷ್ ಪರಿಕಲ್ಪನೆಯನ್ನು ಸ್ಥಿರ ಹಾಗೂ ಆರೋಗ್ಯವಂತ ಸಮಾಜದ ಗುರುತು ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. “ಭಾರತದಲ್ಲಿ ಮಧ್ಯಮ ವರ್ಗದ ನೈತಿಕತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಈ ದೇಶದಲ್ಲಿ ಮದುವೆ ಪದ್ಧತಿಗಳು ನಶಿಸಿದ ಬಳಿಕ ಮಾತ್ರವೇ,
ಲಿವ್ ಇನ್ ಸಂಬಂಧ ವ್ಯವಸ್ಥೆಯನ್ನು ಸಹಜ ಎಂದು ಪರಿಗಣಿಸಬಹುದಾಗಿದೆ. ಅಭಿವೃದ್ಧಿ ಹೊಂದಿದ ಎಂದು ಹೇಳುವ ಅನೇಕ ದೇಶಗಳಲ್ಲಿ ವಿವಾಹ ಪದ್ಧತಿಯನ್ನು ಕಾಪಾಡಿಕೊಳ್ಳುವುದು ಅವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ” ಎಂದು ಹೈಕೋರ್ಟ್ ಪೀಠ ಹೇಳಿದೆ. ಭಾರತದಲ್ಲಿ ಇದೇ ರೀತಿಯ ಬೆಳವಣಿಗೆ ನಡೆಯುತ್ತಿದೆ ಎಂದು ತನ್ನ ಆದೇಶದಲ್ಲಿ ಉಲ್ಲೇಖಿಸಿದ ನ್ಯಾಯಮೂರ್ತಿ, ನಾವು ಭವಿಷ್ಯದಲ್ಲಿ ನಮಗೆ ಭಾರಿ ಸಮಸ್ಯೆ ಸೃಷ್ಟಿಸುವಂತಹ ಸನ್ನಿವೇಶದ ಕಡೆಗೆ ಸಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.