ಸಕಲೇಶಪುರ : ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅರ್ಜುನ ಆನೆ ಅಂತ್ಯಕ್ರಿಯೆಗೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
8 ಬಾರಿ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಜುನ ಆನೆ ಹೆಸರಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಸೂಕ್ತ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಜನರ ಮನವೊಲಿಕೆಗೆ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಪ್ರತಿಭಟನೆಯನ್ನು ತೀವ್ರಗೊಳಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
ಪೊಲೀಸರು ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾಕಾರರು, ಸಾರ್ವಜನಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ದಬ್ಬಳ್ಳಿಕಟ್ಟೆಯಲ್ಲಿ ಅರ್ಜುನ ಮೃತಪಟ್ಟ ಸ್ಥಳದಲ್ಲಿಯೇ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದು 2 ಜೆಸಿಬಿಗಳ ಮೂಲಕ ಆಳವಾದ ಗುಂಡಿಗಳನ್ನು ತೆಗೆದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.