ಮುಂಬರುವ ಲೋಕಸಭೆ ಚುನಾವಣೆ ಮೇಲೆ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದುರ್ಬಳಕೆ ಮಾಡಿಕೊಂಡು ಚೀನಾಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಭಾರತಕ್ಕೆ ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ.
ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದುರುಪಯೋಗದ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಈ ಎಚ್ಚರಿಕೆ ಬಂದಿರುವುದು ಗಮನಾರ್ಹವಾಗಿದೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚೀನಾ ಎಐ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಚುನಾವಣೆಗಳ ಮೇಲೆ ಪ್ರಭಾವ ಬೀರಬಹುದು ಎಂದು ಮೈಕ್ರೋಸಾಫ್ಟ್ ಹೇಳಿದೆ.
ಮೈಕ್ರೋಸಾಫ್ಟ್ ಪ್ರಕಾರ, ಚೀನಾ ಸರ್ಕಾರದ ಸೈಬರ್ ಗುಂಪುಗಳು ಈ ವರ್ಷ ನಡೆಯಲಿರುವ ಪ್ರಮುಖ ಚುನಾವಣೆಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ ಮತ್ತು ಉತ್ತರ ಕೊರಿಯಾ ಕೂಡ ಇದರಲ್ಲಿ ಪಾತ್ರ ವಹಿಸಬಹುದು. ಈ ವರ್ಷ ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ವಿಶೇಷವಾಗಿ ಭಾರತ, ದಕ್ಷಿಣ ಕೊರಿಯಾ ಮತ್ತು ಅಮೆರಿಕದಲ್ಲಿ ಚುನಾವಣೆಗಳು ನಡೆಯಲಿವೆ.
ಹ್ಯಾಕರ್ಗಳಿಗೆ ಎಐ ಪ್ರಮುಖ ಅಸ್ತ್ರವಾಗಿದೆ ಎಂದು ಕಂಪನಿ ಹೇಳಿದೆ. ಹ್ಯಾಕರ್ಗಳು ವೀಡಿಯೊಗಳನ್ನು ಸುಲಭವಾಗಿ ಮಾರ್ಫ್ ಮಾಡಬಹುದು . ಎಐ ಸಹಾಯದಿಂದ ಪ್ರಸಿದ್ಧ ವ್ಯಕ್ತಿಗಳ ಧ್ವನಿಗಳನ್ನು ಬದಲಾಯಿಸಬಹುದು ಮತ್ತು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು. ಇದು ವೈರಲ್ ಆಗಲು ಮತ್ತು ಲಕ್ಷಾಂತರ ಜನರನ್ನು ತಲುಪುವುದರಿಂದ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ಕಂಪನಿ ಎಚ್ಚರಿಕೆ ನೀಡಿದೆ.