ಮೈಸೂರು, ಡಿಸೆಂಬರ್ 28: ಕಳೆದ ಎರಡು ಅವಧಿಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿರುವ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಸಾಧಿಸುವ ಬಯಕೆಯಲ್ಲಿದ್ದಾರೆ. ಆದರೆ ಅವರ ಮೇಲೆ ಮುಗಿ ಬೀಳುತ್ತಿರುವ ‘ಕೈ’ಪಡೆ ಯಾವುದೇ ಕಾರಣಕ್ಕೂ ಗೆಲ್ಲಲು ಬಿಡಬಾರದೆಂಬ ಹಠಕ್ಕೆ ಬಿದ್ದಿದೆ. ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಸಿಎಂ ಸಿದ್ದರಾಮಯ್ಯ ಅವರತ್ತ ಬೊಟ್ಟು ಮಾಡುತ್ತಿದೆ. ಇಷ್ಟಕ್ಕೂ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೂ ಸಿಎಂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ? ಬಿಜೆಪಿ ಸಂಸದ ಪ್ರತಾಪ್ ಸಿಂಹ ಸೋತರೆ ಸಿದ್ದರಾಮಯ್ಯ ಅವರಿಗೇನು ಲಾಭ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ಕಳೆದ ಎರಡು ಅವಧಿಯಲ್ಲಿ ಅಂದರೆ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್ ಸಿಂಹ ಅವರಿಗೆ ಎದುರಾಳಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಪೈಪೋಟಿ ನೀಡಿರಲಿಲ್ಲ. ಹೀಗಾಗಿ ಅವರು ಸುಲಭವಾಗಿ ಗೆದ್ದಿದ್ದರು.
2014ರ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರತಾಪ್ ಸಿಂಹ ಅವರಿಗೆ ಅಂದು ಕಾಂಗ್ರೆಸ್ನ ಹಾಲಿ ಸಂಸದರಾಗಿದ್ದ ಹೆಚ್.ವಿಶ್ವನಾಥ್ ಪೈಪೋಟಿ ನೀಡಿದ್ದರು. ಆದರೆ ನರೇಂದ್ರ ಮೋದಿ ಅವರ ಅಲೆಯಲ್ಲಿ ರಾಜಕೀಯದ ಅರಿಯದ ಪತ್ರಕರ್ತ ಪ್ರತಾಪ್ ಸಿಂಹ ಗೆದ್ದು ಬಂದಿದ್ದರು. ನಂತರದ ಬೆಳವಣಿಗೆಯಲ್ಲಿ 2019ರ ವೇಳೆಗೆ ಕಾಂಗ್ರೆಸ್ನಲ್ಲಿ ಎದುರಾಳಿಗಳೇ ಇಲ್ಲವಾಗಿದ್ದರು. ಕಾರಣ ಆ ವೇಳೆಗೆ ಕಾಂಗ್ರೆಸ್ ನಲ್ಲಿದ್ದ ಹೆಚ್.ವಿಶ್ವನಾಥ್ ಅವರು ಪಕ್ಷ ತೊರೆದು ಜೆಡಿಎಸ್ ಸೇರಿ ಹುಣಸೂರಿನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದರು.
ಪ್ರತಾಪ್ ಸಿಂಹ ಅವರನ್ನು ಮಣಿಸಲೇ ಬೇಕೆಂಬ ಹಠ ಇವತ್ತಿನದಲ್ಲ. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ಸುದ್ದಿಗೋಷ್ಠಿ ಕರೆದು ಟೀಕಿಸುವುದರೊಂದಿಗೆ ಹಲವು ಸವಾಲುಗಳನ್ನು ಎಸೆಯುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲದೆ ಅವರ ವಿರುದ್ಧ ಹಲವು ಪ್ರತಿಭಟನೆಗಳನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಶಃ ರಾಜ್ಯದಲ್ಲಿರುವ ಸಂಸದರ ಪೈಕಿ ಪ್ರತಾಪ್ ಸಿಂಹ ವಿರುದ್ಧ ಮಾಡಿದಷ್ಟು ಆರೋಪ ಪ್ರತಿಭಟನೆಗಳನ್ನು ಕಾಂಗ್ರೆಸ್ ನಾಯಕರು ಇನ್ಯಾರ ಮೇಲೆಯೂ ಮಾಡಿಲ್ಲ ಎಂಬುದನ್ನು ಒಪ್ಪಿಕೊಳ್ಳಲೆ ಬೇಕಾಗಿದೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪ್ರತಾಪ್ ಸಿಂಹ ವಿರುದ್ಧ ರಾಜಕೀಯ ಹೋರಾಟವನ್ನು ಕಾಂಗ್ರೆಸ್ ತೀವ್ರಗೊಳಿಸಿದೆ. ಸಂಸತ್ ದಾಂಧಲೆ ಪ್ರಕರಣ, ಸೋಮಾರಿ ಸಿದ್ದ ಪದಬಳಕೆ ಪ್ರಕರಣ ಹೀಗೆ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡ ಕಾಂಗ್ರೆಸ್ ಪ್ರತಿಭಟನೆ ಮತ್ತು ಎಫ್ಐಆರ್ ದಾಖಲು ಮಾಡುವ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರತೆ ಕಡೆಗೆ ಕೊಂಡೊಯ್ಯುತ್ತಿದೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ದಶಪಥ ರಸ್ತೆ ಮಾಡಿಸಿದ್ದು ನಾವೇ.. ಪ್ರತಾಪ್ ಸಿಂಹ ಏನೂ ಮಾಡಿಲ್ಲ ಎನ್ನುವ ಮೂಲಕ ದಶಪಥ ಹೆದ್ದಾರಿಯ ಕ್ರೆಡಿಟ್ ವಾರ್ ಶುರು ಮಾಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರೆಲ್ಲರೂ ಒಟ್ಟಾಗಿ ಪ್ರತಾಪಸಿಂಹ ವಿರುದ್ಧ ಮುಗಿಬಿದ್ದಿದ್ದಂತು ನಿಜ. ಚುನಾವಣೆ ವೇಳೆಗೆ ಇನ್ನು ಏನೆಲ್ಲ ನಡೆಯಲಿದೆಯೋ ಕಾದು ನೋಡಬೇಕಿದೆ.