ಲೇಬರ್ ಪಕ್ಷದ ಸಾದಿಕ್ ಖಾನ್ ಸತತ ಮೂರನೇ ಬಾರಿಎಗ ಲಂಡನ್ ಮೇಯರ್ ಆಗುವ ಮೂಲಕ ಐತಿಹಾಸಿಕ ಜಯ ಸಾಧಿಸಿದ್ದಾರೆ.
2016ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಲಂಡನ್ ಮೇಯರ್ ಆಗಿ ಆಯ್ಕೆಯಾಗಿದ್ದ ಸಾದಿಕ್ ಖಾನ್, ತಮ್ಮ ಕನ್ಸರ್ವೇರ್ಟಿವ್ ಪಕ್ಷದ ಎದುರಾಳಿ ಸುಸಾನ್ ಹಾಲ್ ಅವರನ್ನು 2.76 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಲೇಬರ್ ಪಕ್ಷದ ಪರವಾಗಿ ಶೇಕಡ 3.2ರಷ್ಟು ಹೆಚ್ಚುವರಿ ಮತಗಳು ಚಲಾವಣೆಯಾಗಿವೆ.
ಒಟ್ಟು 14 ಕ್ಷೇತ್ರಗಳ ಪೈಕಿ ಸಾದಿಕ್ ಖಾನ್ 9 ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಇದರದಲ್ಲಿ ಟೋರಿಸ್ನಿಂದ ಲಭ್ಯವಾಗಿರುವ ಎರಡು ಹೆಚ್ಚುವರಿ ಸ್ಥಾನಗಳು ಸೇರಿವೆ. 24 ಲಕ್ಷಕ್ಕೂ ಅಧಿಕ ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ಒಟ್ಟಾರೆ ಶೇಕಡ 42.8ರಷ್ಟು ಮತದಾನವಾಗಿತ್ತು. ಇದು ಕಳೆದ ಬಾರಿ 2021ರಲಿ ನಡೆದ ಮೇಯರ್ ಚುನಾವಣೆಯಲ್ಲಿ ಚಲಾವಣೆಯಾದ ಮತಕ್ಕೆ ಹೋಲಿಸಿದರೆ ತುಸು ಕಡಿಮೆಯಾಗಿದೆ.
ಗೆಲುವನ್ನು ಘೋಷಿಸಿದ ಬಳಿಕ ಮಾತನಾಡಿದ ಸಾದಿಕ್ ಖಾನ್, ನನಗೆ ಪ್ರೀತಿಯ ನಗರವಾಗಿರುವ ಲಂಡನ್ನ ಜನತೆಗೆ ಸೇವೆ ಸಲ್ಲಿಸಲು ಸಿಕ್ಕಿದ ದೊಡ್ಡ ಗೌರವ ಇದಾಗಿದೆ. ಕಳೆದ ಕೆಲ ತಿಂಗಳುಗಳು ಅತ್ಯಂತ ಕಠಿಣವಾಗಿದ್ದವು. ಇದೀಗ ನಾನು ವಿನಮ್ರವಾಗಿದ್ದೇನೆ ಎಂದು ಹೇಳಿದರು.
ನಾವು ನಿರಂತರ ಋಣಾತ್ಮಕ ಪ್ರಚಾರವನ್ನು ಎದುರಿಸಬೇಕಾಯಿತು. ನಾವು ಇವೆಲ್ಲಕ್ಕೆ ಸೂಕ್ತ ಅಂಕಿ ಅಂಶಗಳೊಂದಿಗೆ ಉತ್ತರಿಸಿದ್ದೇವೆ ಎಂಬ ಹೆಮ್ಮೆ ನಮಗಿದೆ. ಮೂರನೇ ಬಾರಿಗೆ ನಿರಂತರವಾಗಿ ಗೆದ್ದಿರುವುದು ನಮಗೆ ಸಂದ ಗೌರವ ಮತ್ತು ಗೆಲುವಿನ ಅಂತರ ಮತ್ತಷ್ಟು ಹೆಚ್ಚಿದೆ. ಇದು ಇತಿಹಾಸ ನಿರ್ಮಿಸುವ ವಿಚಾರವಲ್ಲ, ಬದಲಾಗಿ ಭವಿಷ್ಯವನ್ನು ರೂಪಿಸುವ ಕಾಲ ಎಂದು ತಿಳಿಸಿದರು.