ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಇದೀಗ ತುಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಮಂಗಳೂರು ಮೂಲದ ಶಿಲ್ಪಾ ಗಣೇಶ್ ಇದೀಗ ತುಳುವಿನಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್ ತಿಂಗಳಿನಿಂದ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದ್ದು, ಚಿತ್ರವನ್ನು ಸಂದೀಪ್ ಬೆದ್ರ ನಿರ್ದೇಶನ ಮಾಡುತ್ತಿದ್ದಾರೆ.
ಹರಿಕೃಷ್ಣ ಬಂಟ್ವಾಳ್ ಪುತ್ರ ನಿತ್ಯಪ್ರಕಾಶ್ ಬಂಟ್ವಾಳ್ ಅವರು ಶಿಲ್ಪಾ ಗಣೇಶ್ ನಿರ್ಮಾಣದ ಈ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ತಿದ್ದಾರೆ. ನಾಯಕಿಯ ಪಾತ್ರಕ್ಕೆ ಹೊಸಬರನ್ನು ಪರಿಚಯಿಸುವ ಸಾಧ್ಯತೆ ಇದೆ. ಅಂದಹಾಗೆ, ಗಣೇಶ್ ನಾಯಕತ್ವದಲ್ಲಿ ಅನೇಕ ಸಿನಿಮಾಗಳನ್ನು ಶಿಲ್ಪಾ ಗಣೇಶ್ ನಿರ್ಮಾಣ ಮಾಡಿದ್ದಾರೆ. ಇದೀಗ ಅವರಿಗೆ ತವರಿನಲ್ಲಿ ಒಂದು ಸಿನಿಮಾವನ್ನು ನಿರ್ಮಾಣ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶಿಲ್ಪಾ ತುಳು ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿದ್ದಾರೆ.
ಶಿಲ್ಪಾ ಗಣೇಶ್ ಮೂಲತಃ ಕರಾವಳಿಯವರು. ಅವರ ತಾಯಿ ಮಂಗಳೂರಿನವರಾಗಿದ್ದು, ಶಿಲ್ಪಾ ಬೆಳೆದದ್ದು ಉಡುಪಿಯ ಬಾರ್ಕೂರಿನಲ್ಲಿ. ಈಗಾಗಲೇ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಅವರಿಗೆ ತಮ್ಮ ಮಾತೃಭಾಷೆಯಲ್ಲೊಂದು ಸಿನಿಮಾ ಮಾಡಬೇಕೆಂಬ ಬಯಕೆಯಿತ್ತು. ಇದೀಗ ಆ ಕನಸು ನನಸಾಗುತ್ತಿದೆ.
ಮಂಗಳೂರಿನ ಕದ್ರಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟ ಗಣೇಶ್ ಅವರು ತುಳುವಿನಲ್ಲಿ ಸಿನಿಮಾ ಮಾಡಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ಶಿಲ್ಪಾ ಗಣೇಶ್ ತುಳು ಸಿನಿಮಾ ಮಾಡಲು ಮುಂದಾಗಿದ್ದಾರೆ.
“ಶಿಲ್ಪಾ ಗಣೇಶ್ ತುಳುವಿನಲ್ಲಿ ಸಿನಿಮಾ ಮಾಡುತ್ತಿರುವುದು ಮತ್ತು ಅದರ ನಿರ್ದೇಶನದ ಅವಕಾಶ ನನಗೆ ನೀಡಿರುವುದು ಖುಷಿ ತಂದಿದೆ. ತುಳುನಾಡಿನ ಸಂಸ್ಕೃತಿ, ಪರಂಪರೆಯ ಜತೆಗೆ ಹಾಸ್ಯ ಜೋಡಿಸಿಕೊಂಡು ವಿಭಿನ್ನವಾಗಿ ಈ ಸಿನಿಮಾ ಬರಲಿದೆ. ಶೂಟಿಂಗ್ ಆರಂಭವಾಗುವ ಮುನ್ನವೇ ಕೋಸ್ಟಲ್ವುಡ್ ಮತ್ತು ಸ್ಯಾಂಡಲ್ವುಡ್ನಲ್ಲಿ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ” ಎಂದು ಸಂದೀಪ್ ಮೂಡುಬಿದಿರೆ ತಿಳಿಸಿದ್ದಾರೆ.