ನವದೆಹಲಿ: ಭಾರತೀಯರು ಅನುಪಯುಕ್ತ ಬೇಡವಾದ ವಸ್ತುಗಳಿಂದ ಉಪಯೋಗಕಾರಿ ವಸ್ತುಗಳನ್ನು ತಯಾರಿಸುವಲ್ಲಿ ಸುಪ್ರಸಿದ್ಧರು. ಬೇಡದ ಬಿಸಾಕುವ ವಸ್ತುಗಳಿಂದ ಉಪಯುಕ್ತವಾದ ವಸ್ತುಗಳನ್ನು ತಯಾರಿಸಿ ಪ್ರಸಿದ್ಧರಾದ ಅನೇಕರಿದ್ದಾರೆ. ಇಂತಹ ಅನೇಕ ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ. ವಾಹನದ ಬೇಡದ ಬಿಡಿಭಾಗಗಳು, ಸೋಲಾರ ಪ್ಯಾನಲ್ ಬಳಸಿ ಹುಡುಗನೋರ್ವ ಒಂದು ಕ್ಷಣಕ್ಕೆ 7 ಜನ ಸಾಗಬಲ್ಲ, ಸೋಲಾರ್ ಸ್ಕೂಟರೊಂದನ್ನು ತಯಾರಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉದ್ಯಮಿ ಹರ್ಷ್ ಗೋಯೆಂಕಾ ಅವರು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೇಡದ ಸ್ಕ್ರ್ಯಾಪ್ನಿಂದ (Scrap) ತಯಾರಿಸಿದ ಏಳು ಆಸನಗಳ ಸೌರಶಕ್ತಿ ಚಾಲಿತ ವಾಹನದ (solar powered vehicle) ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಅದು ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ವಿಡಿಯೋದಲ್ಲಿ ಯುವಕನೋರ್ವ ಏಳು ಆಸನಗಳ ವಾಹನವನ್ನು ಓಡಿಸುತ್ತಿರುವುದು ಕಾಣಿಸುತ್ತಿದೆ. ವಾಹನವು ಬಹುತೇಕ ಸ್ಕೂಟರ್ನಂತೆ ಕಾಣುತ್ತದೆ, ಜೊತೆಗೆ ಮೇಲ್ಭಾಗದಲ್ಲಿರುವ ಸೌರಫಲಕವೂ (solar panels) ಕೆಳಗೆ ಕುಳಿತವರಿಗೆ ನೆರಳಾಗಿ ನಿಂತಿದೆ. ವಿಡಿಯೋದಲ್ಲಿ ಯುವಕ ತಾನು ಹೇಗೆ ಗುಜರಿ ವಸ್ತುಗಳಿಂದ ಈ ಸ್ಕೂಟರ್ ತಯಾರಿಸಿದೆ ಎಂಬುದನ್ನು ವಿವರಿಸಿದ್ದಾನೆ.
ವಾಹನವು ಚೆನ್ನಾಗಿ ಸುಸ್ಥಿರವಾಗಿರುವುದು ಮಾತ್ರವಲ್ಲದೆ ಬಿಸಿಲಿನಲ್ಲಿ ಪ್ರಯಾಣಿಕರಿಗೆ ನೆರಳು ನೀಡುತ್ತದೆ. ಈ ವಿಡಿಯೋ ಶೇರ್ ಮಾಡಿಕೊಂಡಿರುವ ಗೋಯೆಂಕಾ (Harsh Goenka) ಅವರು, ಒಂದು ಉತ್ಪನ್ನದಿಂದ ಬಹಳ ಸುಸ್ಥಿರವಾದ ಆವಿಷ್ಕಾರ, ಗುಜರಿ ಸಾಮಾನುಗಳಿಂದ ತಯಾರಿಸಲಾಗಿದೆ. 7 ಸೀಟುಗಳ ವಾಹನ, ಸೋಲಾರ್ ಶಕ್ತಿಯಿಂದ ನಡೆಯುವ ಇದು ಸೂರ್ಯನ ಬಿಸಿಲಿನಿಂದ ನೆರಳನ್ನು ನೀಡುತ್ತದೆ. ಈ ರೀತಿಯ ಮಿತವ್ಯಯದ ಆವಿಷ್ಕಾರಗಳು ನಮ್ಮ ಭಾರತದ ಬಗ್ಗೆ ನನಗೆ ಹೆಮ್ಮೆ ತಂದಿದೆ ಎಂದು ಗೋಯೆಂಕಾ ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅನೇಕರು ಕಾಮೆಂಟ್ ಮಾಡಿದ್ದಾರೆ. ಯುವಕನ ಪ್ರತಿಭೆಯನ್ನು ಅನೇಕರು ಹೊಗಳಿದ್ದಾರೆ. ಅನೇಕರು ಈತನಿಗೆ ಬೆಂಬಲ ನೀಡಿ ದೊಡ್ಡ ಪ್ರಮಾಣದಲ್ಲಿ ಈ ವಾಹನ ತಯಾರು ಮಾಡಬೇಕು. ಇದು ಹಳ್ಳಿಗಾಡಿನಲ್ಲಿ ಜನರಿಗೆ ಒಳ್ಳೆಯ ನೆರವಿಗೆ ಬರಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. ದೊಡ್ಡ ದೊಡ್ಡ ಉದ್ಯಮ ಸಂಸ್ಥೆಗಳು ಈತನನ್ನು ಕೆಲಸಕ್ಕೆ ತೆಗೆದುಕೊಂಡು ಇಂತಹ ವಾಹನವನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.