ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಬುಧವಾರ ಲಂಡನ್ನ ದಿ ಓವಲ್ ಮೈದಾನದಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪೈನಲ್ ಪಂದ್ಯದಲ್ಲಿ ಸೆಣಸಲಿವೆ. ಅಂದಹಾಗೆ 2023ರ ಐಪಿಎಲ್ ಟೂರ್ನಿಯಲ್ಲಿ 600ಕ್ಕೂ ಹೆಚ್ಚಿನ ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಇದೀಗ ಫೈನಲ್ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.
ಜಿಯೋ ಸಿನಿಮಾ ಜೊತೆ ಮಾತನಾಡಿದ ಎಬಿ ಡಿವಿಲಿಯರ್ಸ್, “ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಯಾವುದೇ ಸರಣಿಯಾದರೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಆಟಗಾರ ವಿರಾಟ್ ಕೊಹ್ಲಿ. ವಿಶ್ವದ ಯಾವುದೇ ಪ್ರದೇಶಕ್ಕೆ ಪ್ರಯಾಣ ಬೆಳೆಸಿದರೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಅವರು ಕ್ರಿಕೆಟ್ ಅನ್ನು ಆನಂದಿಸುವುದನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಇಂಗ್ಲೆಂಡ್ನಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಲು ಎದುರು ನೋಡುತ್ತಿದ್ದೇನೆ,” ಎಂದು ಹೇಳಿದ್ದಾರೆ.
ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೂ ಮುನ್ನ ಭಾರತ ತಂಡ ಗಾಯಾಳುಗಳ ಸಮಸ್ಯೆಯನ್ನು ಎದುರಿಸಿದೆ. ಜಸ್ಪ್ರೀತ್ ಬುಮ್ರಾ, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ವಿಭಿನ್ನ ಗಾಯದ ಕಾರಣಗಳಿಂದಾಗಿ ಭಾರತ ತಂಡದಿಂದ ದೂರ ಉಳಿದಿದ್ದಾರೆ. ಇದರ ಹೊರತಾಗಿಯೂ ಭಾರತ ತಂಡ ಬಲಿಷ್ಠವಾಗಿದೆ.
ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್ ಹಾಗೂ ಜಯದೇವ್ ಉನಾದ್ಕಟ್ ಸೇರಿದಂತೆ ಭಾರತ ತಂಡದ ಬೌಲಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಬುಮ್ರಾ ಸೇವೆ ಕಳೆದುಕೊಂಡಿರುವುದು ಭಾರತ ತಂಡಕ್ಕೆ ದೊಡ್ಡ ನಷ್ಟ. ಆದರೆ, ಅವರ ಸ್ಥಾನವನ್ನು ಮೊಹಮ್ಮದ್ ಸಿರಾಜ್ ತುಂಬಲಿದ್ದಾರೆಂದು ಎಬಿ ಡಿ ವಿಲಿಯರ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.