2007ರಲ್ಲಿ ತೆರೆಕಂಡ ದುನಿಯಾ ವಿಜಯ್ ನಟನೆಯ ದುನಿಯಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಲೂಸ್ ಮಾದ ಯೋಗಿ ಇದೀಗ ಐವತ್ತನೇ ಸಿನಿಮಾದ ಹೊಸ್ತಿಲಿನಲ್ಲಿದ್ದಾರೆ. ಇತ್ತೀಚೆಗಷ್ಟೇ ಯೋಗಿ ನಟನೆಯ 50ನೇ ಸಿನಿಮಾದ ಮುಹೂರ್ತ ನಡೆದಿದ್ದು ಚಿತ್ರಕ್ಕೆ ರೋಸಿ ಎಂದು ಟೈಟಲ್ ಇಡಲಾಗಿದೆ. ಆದರೆ ಯೋಗಿ ನಟನೆಯ ಸಿನಿಮಾಗೆ ರೋಸಿ ಟೈಟಲ್ ಸಿಗುವುದು ಅನುಮಾನವಾಗಿದೆ.
ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ, ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ ‘ರೋಸಿ 45’ ಶೀರ್ಷಿಕೆಯನ್ನು ಈಗಾಗಲೇ ನೋಂದಾಯಿಸಲಾಗಿದೆ. ಚಿತ್ರದ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಲಾಗಿದೆ. ಆದರೆ ಇದೀಗ ಯೋಗಿ ನಟನೆಯ ಡಿ.ವೈ.ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ ‘ರೋಸಿ’ ಎಂದು ಶೀರ್ಷಿಕೆ ಇಡಲಾಗಿತ್ತು. ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೊದಲು ಶೀರ್ಷಿಕೆ ನೋಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ವಾಣಿಜ್ಯ ಮಂಡಳಿ ಹೇಳಿದ್ದು, ಹೀಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45 ಶೀರ್ಷಿಕೆ ನೀಡಲಾಗಿದೆ.
ಇನ್ನು ಮುಂದೆ ಯಾರು ಕೂಡ ‘ರೋಸಿ’ ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ ಎಂದು ರೋಸಿ 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಸೂಚನೆ ನೀಡಿದ್ದಾರೆ.