ಮಂಡ್ಯ : ಸಕ್ಕರೆನಾಡಿನ ಮದ್ದೂರು ವಿಧಾನಸಭಾ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಹಾಲಿ – ಮಾಜಿ ಪ್ರಧಾನಿಗಳೇ ಇಲ್ಲಿ ಚುನಾವಣಾ ಪ್ರಚಾರಕ್ಕಿಳಿದಿರುವ ಈ ಕ್ಷೇತ್ರದ ವಿಶೇಷತೆಯಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತದಾರರಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದ್ದು, ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರಿದೆ.
ಕೆಲ ತಿಂಗಳುಗಳ ಹಿಂದಷ್ಟೇ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬೃಹತ್ ಸಮಾವೇಶ ನಡೆಸಿ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಹಾಕಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್, ನಟಿ ತಾರಾ ಅವರುಗಳು ಕೆಲ ದಿನಗಳ ಹಿಂದೆ ಭರ್ಜರಿ ಪ್ರಚಾರ ನಡೆಸಿ ಕಮಲ ಪಾಳಯಕ್ಕೆ ಜೀವ ತುಂಬಿದ್ದರು. ಇಂದು ( ಶನಿವಾರ ) ಮದ್ದೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಖುದ್ದು ಅಖಾಡಕ್ಕೆ ಧುಮುಕಿದ್ದು, ಬೃಹತ್ ರೋಡ್ ಶೋ ನಡೆಸಿ ಎಸ್.ಪಿ.ಸ್ವಾಮಿ ಪರ ಮತಯಾಚನೆ ನಡೆಸಲಿದ್ದು, ಹೇಗಾದರೂ ಮಾಡಿ ಈ ಬಾರಿ ಮದ್ದೂರು ಕ್ಷೇತ್ರದಲ್ಲಿ ಕಮಲವನ್ನು ಆರಳಿಸಬೇಕೆಂಬ ತವಕದಲ್ಲಿ ಬಿಜೆಪಿ ಕಲಿಗಳು ಟೊಂಕಕಟ್ಟಿ ನಿಂತಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ್ರು ಅಖಾಡಕ್ಕೆ ಧುಮುಕಿ ತಮ್ಮ ಪಕ್ಷದ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಪರವಾಗಿ ಕೆ.ಎಂ.ದೊಡ್ಡಿ, ಕೆ.ಹೊನ್ನಲಗೆರೆ, ಮದ್ದೂರು ಪಟ್ಟಣ ಸೇರಿದಂತೆ ವಿವಿಧೆಡೆ ಬಹಿರಂಗ ಪ್ರಚಾರ ನಡೆಸಿ ಮತ ಬೇಟೆಯಾಡುವ ಮೂಲಕ ಭದ್ರಕೋಟೆಯನ್ನ ಮತ್ತಷ್ಟು ಭದ್ರ ಮಾಡಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಪರ ಗುರುವಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಷೇತ್ರದಾದ್ಯಂತ ಯುವ ಜನತೆಯ ಮತ ಬುಟ್ಟಿಗೆ ಕೈ ಹಾಕಿ ಬಾರಿ ಸಂಚಲನ ಮೂಡಿಸಿದ್ದರು. ಇಂದು ಕೈ ಅಭ್ಯರ್ಥಿ ಕೆ.ಎಂ.ಉದಯ್ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾಮಿಡಿ ಕಿಂಗ್ ಸಾಧುಕೋಕಿಲ ಸೇರಿದಂತೆ ಕೈ ನಾಯಕರು ಮದ್ದೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ್ ಶೋ ಮತ್ತು ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಕೈ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಪರ ಕ್ಯಾಂಪೇನ್ ಮಾಡುತ್ತಿದ್ದು, ಭದ್ರಕೋಟೆಗೆ ಲಗ್ಗೆ ಹಾಕಲು ಕೈ ನಾಯಕರು ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಗಣ್ಯರ ಪ್ರವಾಸ ಕಾರ್ಯಕ್ರಮ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಪರ ಶನಿವಾರ ಬೆಳಿಗ್ಗೆ 11 ಗಂಟೆಗೆ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಿಂದ ಪೇಟೆ ಬೀದಿ ಮೂಲಕ ಶಿವಪುರದ ಧ್ವಜ ಸತ್ಯಾಗ್ರಹ ಸೌಧದವರೆಗೆ ಬೃಹತ್ ರೋಡ್ ಶೋ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೆಡಿಎಸ್ ಅಭ್ಯರ್ಥಿ, ಶಾಸಕ ಡಿ.ಸಿ.ತಮ್ಮಣ್ಣ ಪರ ಬೆಳಿಗ್ಗೆ 11.30 ಕ್ಕೆ ಕೆ.ಎಂ.ದೊಡ್ಡಿ, 1.30 ಕ್ಕೆ ಕೆ.ಹೊನ್ನಲಗೆರೆ ಹಾಗೂ 2 ಗಂಟೆಗೆ ಮದ್ದೂರು ಪಟ್ಟಣದ ಕೆಮ್ಮಣ್ಣು ನಾಲೆ ವೃತ್ತದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಪರವಾಗಿ ಸಂಜೆ 4 ಗಂಟೆಗೆ ಮದ್ದೂರು ಪಟ್ಟಣದ ಕೊಲ್ಲಿ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ರೋಡ್ ಶೋ ಮತ್ತು ತಾಲೂಕಿನ ಕೊಪ್ಪ ಗ್ರಾಮದಲ್ಲಿ 5 ಗಂಟೆಗೆ ಕೈ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಪರ ಚುನಾವಣಾ ಮತ ಬೇಟೆಯಾಡಿದ್ದಾರೆ.
ಇನ್ನು ಒಂದೇ ದಿನ ವಿವಿಧ ಪಕ್ಷಗಳ ನಾಯಕರುಗಳು ಚುನಾವಣಾ ಪ್ರಚಾರ ನಡೆಸುತ್ತಿರುವುದರಿಂದ ಮದ್ದೂರಿನ ಚುನಾವಣಾ ಕಾವು ಮತ್ತಷ್ಟು ರಂಗೇರಲಿದ್ದು, ಮತದಾರರನ ಆಶೀರ್ವಾದ ಯಾರ ಮೇಲೆ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ : ಗಿರೀಶ್ ರಾಜ್ ಮಂಡ್ಯ.