ನವದೆಹಲಿ: 4 ವರ್ಷ ಪ್ರೀತಿಸಿ ಇದೀಗ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ರೊಚ್ಚಿಗೆದ್ದು ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಪ್ರಿಯತಮೆಗೆ ಚಾಕು ಇರಿದ ಘಟನೆ ಆಗ್ನೇಯ ದೆಹಲಿಯ ಬದರ್ಪುರ ಪ್ರದೇಶದಲ್ಲಿ ನಡೆದಿದೆ.
ಆರೋಪಿಯನ್ನು ಮದುವೆಯಾಗಲು ಒಪ್ಪದಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತೆ ತನ್ನ ಗೆಳತಿಯ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಂದರೆ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕಳೆದ 4 ವರ್ಷಗಳಿಂದ ಆರೋಪಿ ಹಾಗೂ ಸಂತ್ರಸ್ತೆ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಬಾಲಕಿ ಬ್ರೇಕಪ್ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾಳೆ. ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದಿರುವ ಆರೋಪಿ ಆಕೆಯ ಮೇಲೆ ಮಾರಾಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ಪರಿಣಾಮ ಬಾಲಕಿ ಕತ್ತು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಆಕೆಯನ್ನು ಸ್ಥಳೀಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇತ್ತ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮದುವೆಯಾಗಲು ನಿರಾಕರಿಸಿದ್ದರಿಂದ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದೆ. ಹೀಗಾಗಿ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪೋಲಿಸರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 506 (ಕ್ರಿಮಿನಲ್ ಬೆದರಿಕೆ) ಮೊದಲಾದ ಕೆಸ್ ದಾಖಲಿಸಿಕೊಂಡಿದ್ದಾರೆ.