ಬೆಂಗಳೂರು : ಹಿಂದೆ ಲುಲು ಮಾಲ್ ಕಾಮಗಾರಿ ವೇಳೆ ಕರೆಂಟ್ ಬಿಲ್ ನೀಡಿಲ್ಲ. ಲುಲು ಮಾಲ್ ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ನೀಡಿಲ್ಲ. ಲುಲು ಮಾಲ್ ಬಳಕೆ ಮಾಡಿದ ವಿದ್ಯುತ್ ಬಿಲ್ಗೆ ದಂಡ ಹಾಕುತ್ತೀರಾ? ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಹರಿಹಾಯ್ದರು.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 71 ಯೂನಿಟ್ ವಿದ್ಯುತ್ಗೆ 3 ಪಟ್ಟು ದಂಡ ವಿಧಿಸಿದ್ದಾರೆ. ಒಟ್ಟು 2,526 ರೂಪಾಯಿ ದಂಡ ಹಾಕಬೇಕಿತ್ತು. ಆದರೆ ನನ್ನ ಮನೆಗೆ ತೆಗೆದುಕೊಂಡಿರುವ 33 kV ವಿದ್ಯುತ್ ಬಳಕೆ ಸೇರಿ 68,526 ರೂ. ದಂಡ ವಿಧಿಸಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.
ನನಗೆ ವಿಧಿಸಿದ ದಂಡವನ್ನು (Fine) ನಾನು ಪಾವತಿ ಮಾಡಿದ್ದೇನೆ. ವಿದ್ಯುತ್ ಬಿಲ್ನಲ್ಲಿ ಲೋಪ ಇರುವ ಹಿನ್ನೆಲೆಯಲ್ಲಿ ನಿಮ್ಮ ನಿಯಮ ಏನಿದೆ? ನಿಯಮದ ಲೆಕ್ಕಾಚಾರದಲ್ಲಿ ಪರಿಶೀಲನೆ ಮಾಡಿ ಎಂದು ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ನನ್ನನ್ನ ಕಳ್ಳ ಕಳ್ಳ ಎಂದು ಕರೆಯುತ್ತಾರೆ. ಆದರೆ ಲುಲು ಮಾಲ್ (Lulu Mall) 6 ತಿಂಗಳು ಬಿಲ್ ಪಾವತಿಸಿಲ್ಲ. ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದಕ್ಕೆ ಬಿಲ್ ಹಾಕ್ತಾರಾ? ನನ್ನನ್ನು ಕಳ್ಳ ಎಂದು ಹೇಳುವುದನ್ನು ಬಿಡಿ. ನಾನು ನಿಮ್ಮಷ್ಟು ದೊಡ್ಡ ಕಳ್ಳ ಅಲ್ಲ. ನೀವು ಹಗಲು ದರೋಡೆಕೋರರು. ನಾನು ದಂಡ ಕಟ್ಟಿದ್ದೇನೆ. ನೀವು ಲುಲು ಮಾಲ್ ಕರೆಂಟ್ ಕಳ್ಳತನದ ಬಗ್ಗೆ ತನಿಖೆಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ಸವಾಲು ಎಸೆದರು.