ಹಿಂದಿ ಕಿರುತೆರೆಯ ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಓಟಿಟಿ ಪ್ರಸಾರಕ್ಕಾಗಿ ನಿರ್ಮಾಣವಾಗುತ್ತಿರುವ ವೆಬ್ ಸರಣಿಯ ಪೋಸ್ಟರ್ ನಲ್ಲಿ ಹಿಂದೂ ದೇವತೆಯನ್ನು ಅವಹೇಳನ ಮಾಡಲಾಗಿದೆ ಎಂಬ ಕಾರಣಖ್ಕೆ ನೆಟ್ಟಿಗರು ಏಕ್ತಾ ಕಪೂರ್ ವಿರುದ್ಧ ಗರಂ ಆಗಿದ್ದಾರೆ. ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಕ್ಕೆ ಏಕ್ತಾ ಕ್ಷಮೆ ಕೇಳಬೇಕೆಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.
ಸದ್ಯ ಏಕ್ತಾ ಕಪೂರ್ ಮಾಲೀಕತ್ವದ ಆಲ್ಟ್ ಬಾಲಾಜಿ ಟೆಲಿಫಿಲ್ಮ್ಸ್ ‘ಗಾಂಡಿ ಬಾತ್’ ಎನ್ನುವ ವೆಬ್ ಸರಣಿಯನ್ನು ಆರಂಭಿಸಿದೆ. ಇದೀಗ 6ನೇ ಸರಣಿ ಸಿದ್ಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್ವೊಂದನ್ನು ರಿಲೀಸ್ ಮಾಡಲಾಗಿದೆ. ಆ ಪೋಸ್ಟರ್ನಲ್ಲಿ ಲಕ್ಷ್ಮಿ ದೇವತೆಗೆ ಹೋಲುವಂತಹ ಮಹಿಳೆ ಇದ್ದಾಳೆ. ಆ ಮಹಿಳೆಯ ಮೂಲಕ ಲಕ್ಷ್ಮಿ ದೇವತೆಯನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಗಾಂಡಿಬಾತ್ ವೆಬ್ ಸರಣಿಯ ಥಂಬ್ ನೈಲ್ ಪೋಸ್ಟರ್ನಲ್ಲಿ ಸೊಂಟದ ಬಳಿ ಕಮಲದ ಹೂವು, ಎರಡು ಬದಿಗಳಲ್ಲಿ ನವಿಲುಗಳೊಂದಿಗೆ ಇರುವ ಮಹಿಳೆ ಬಾಯಿ ಮೇಲೆ ಬೆರಳಿಟ್ಟು ‘ಶ್’ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ. ಈ ಪೋಸ್ಟರ್ ವಿವಾದಕ್ಕೀಡಾಗಿದೆ. ಇದೊಂದು ಗ್ರಾಮೀಣ ಭಾರತದ ಕಾಮ ಪ್ರಚೋದಕ ಕಥೆಯನ್ನು ಒಳಗೊಂಡಿರುವ ವೆಬ್ ಸರಣಿಯಾಗಿದ್ದರಿಂದ ಇದರ ಪೋಸ್ಟರ್ ನೆಟ್ಟಿಗರ ಕಣ್ಣು ಕೆಂಪಾಗಿಸಿದೆ.
ಈ ಹಿಂದೆ ಏಕ್ತಾ ಕಪೂರ್ ನಿರ್ಮಾಣದ ವೆಬ್ ಸರಣಿ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡಿತ್ತು.