ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಕಬ್ಜ’ ಚಿತ್ರ ರಿಲೀಸ್ಗೆ ಇನ್ನು ಕೆಲವೇ ದಿನಗಳು ಮಾತ್ರವೇ ಬಾಕಿ ಇದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಭರದ ಸಿದ್ಧತೆ ನಡೆದಿದೆ. ಆರ್. ಚಂದ್ರು ನಿರ್ದೇಶಿಸಿ, ನಿರ್ಮಾಣ ಮಾಡಿರುವ ಕಬ್ಜ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಈ ಮಧ್ಯೆ ಚಿತ್ರತಂಡದಿಂದ ಮತ್ತೊಂದು ಹೊಸ ಅಪ್ಡೇಟ್ ಸಿಕ್ಕಿದೆ.
ತಮಿಳಿನಾಡಿನಲ್ಲಿಕಬ್ಜ ಚಿತ್ರದ ಹಂಚಿಕೆಯ ಹಕ್ಕು ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ ಪಡೆದುಕೊಂಡಿದೆ. ಈ ಮೂಲಕ ಚಿತ್ರತಂಡಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ. ಈ ಬಗ್ಗೆ ಲೈಕಾ ಪ್ರೊಡಕ್ಷನ್ಸ್ ಹಾಗೂ ಆರ್. ಚಂದ್ರು ಕಡೆಯಿಂದ ಅಧಿಕೃತ ಘೋಷಣೆ ಹೊರ ಬಿದ್ದಿದೆ.
ಸಿನಿಮಾವೊಂದು ಅತಿ ಹೆಚ್ಚಿನ ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಹಂಚಿಕೆದಾರರ ಪಾತ್ರ ತುಂಬಾನೇ ಮುಖ್ಯ. ಸಿನಿಮಾ ಜನಪ್ರಿಯ ಹಂಚಿಕೆದಾರರ ಕೈಗೆ ಸೇರಿದರೆ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಹಕಾರಿ ಆಗಲಿದೆ. ಈಗ ಲೈಕಾ ಪ್ರೊಡಕ್ಷನ್ಸ್ ಅವರು ‘ಕಬ್ಜ’ ಚಿತ್ರವನ್ನು ತಮಿಳುನಾಡಿನಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಸಿನಿಮಾಗೆ ಬಲ ಸಿಕ್ಕಿದ್ದು, ಈ ಮೂಲಕ ಕಾಲಿವುಡ್ನಲ್ಲಿ ಕಜ್ಬ ಹೆಚ್ಚು ಘಳಿಸುವ ನಿರೀಕ್ಷೆ ಇದೆ.