ಮಂಡ್ಯ: ಮಗ ಮಾಡಿರುವ ತಪ್ಪಿಗೆ ಶಾಸಕ ಮಾಡಾಳು ವಿರೂಪಾಕ್ಷಪ್ಪ (Madal Virupakshappa) ಯಾಕೆ ರಾಜೀನಾಮೆ ಕೊಡಬೇಕು ಎಂದು ಸಚಿವ ಮಾಧುಸ್ವಾಮಿ (Madhuswamy) ಪ್ರಶ್ನಿಸಿದ್ದಾರೆ.
ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣ ಸಂಬಂಧ ಮಂಡ್ಯದ ಹುಲಿಕೆರೆಯಲ್ಲಿ ಮಾತನಾಡಿದ ಸಚಿವರು, ನಾವು ಅದರ ಬಗ್ಗೆ ಕಮೆಂಟ್ ಮಾಡೊಕೆ ಅಗಲ್ಲ. ಶಾಸಕರು ಯಾಕೆ ರಾಜೀನಾಮೆ ಕೊಡಬೇಕು. ಅವರ ಮಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಅವರ ಮಗ ದುಡ್ಡು ತೆಗೆದುಕೊಂಡಿದ್ದಾನೆ ಮುಂದಿನ ಪರಿಣಾಮ ಎದುರಿಸುತ್ತಾನೆ ಎಂದು ಹೇಳಿದ್ದಾರೆ.
ವಿರೂಪಾಕ್ಷಪ್ಪನ ಮಗ ಭ್ರಷ್ಟಾಚಾರ ನಿಗ್ರಹ ದಳ (ACB) ಯಲ್ಲಿ ಒಬ್ಬ ಆಫೀಸರ್. ಅವನು ಲಂಚ ತೆಗೆದುಕೊಂಡರೆ ವಿರೂಪಾಕ್ಷಪ್ಪ ಏನು ಮಾಡ್ತಾರೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಯಾಕೆ ಬರೆ ಹಾಕಬೇಕು. ಶಾಸಕರ ಮಗ ಮಾಡಿದ್ದಕ್ಕೆ ಸಿಎಂ ಯಾಕೆ ರಾಜೀನಾಮೆ ಕೊಡಬೇಕು. ಇಂತಹ ಅಯೋಗ್ಯರು ಯಾರ್ ಯಾರು ಇದ್ದಾರೆ ಎಂದು ನಾವು ಹುಡುಕಿಕೊಂಡು ಕೂರೋಕೆ ಆಗುತ್ತಾ ಎಂದು ಸಚಿವರು ಪ್ರಶ್ನಿಸಿದರು.
40% ದಂಧೆ ಮಾಡುವುದಕ್ಕೆ ಅವರು ಯಾರೂ ಮಂತ್ರಿಯಲ್ಲ. ಆತ ಒಬ್ಬ ಸರ್ಕಾರಿ ಅಧಿಕಾರಿ, ಎಸಿಬಿಯಲ್ಲಿ ಇದ್ದವರು. ಶಾಸಕರಿಗೂ ಮುಖ್ಯಮಂತ್ರಿಗಳಿಗೂ ಇದರಲ್ಲಿ ಸಂಬಂಧವಿಲ್ಲ. ಕಾಂಗ್ರೆಸ್ನವರಿಗೆ ಏನೂ ಇಲ್ಲ, ಏನಾದ್ರು ಸಿಕ್ಕಿದರೆ ದೊಡ್ಡದು ಮಾಡಿಕೊಂಡು ಹೋಗ್ತಾರೆ. ಮೊದಲು ಭ್ರಷ್ಟಾಚಾರ (Corruption) ಸಾಬೀತು ಆಗಬೇಕು. ಹಣ ಕೊಟ್ಟವರು ತೆಗೆದುಕೊಂಡವರು ಎಲ್ಲಾ ಹೇಳಿಕೆ ತೆಗೆದುಕೊಳ್ಳಬೇಕು ಎಂದರು.
ಈಗ ಅಧಿಕಾರಿಯ ಮನೆಯ ಮೇಲೆ ರೈಡ್ ಆಗಿದೆ. ಈ ಬಗ್ಗೆ ಅವರು ಸೂಕ್ತ ದಾಖಲೆ ನೀಡಿದ್ರೆ, ನಾಳೆ ನಾವು ನೀವು ಏನು ಮಾತಾಡೋಕೆ ಆಗಲ್ಲ. ದುಡ್ಡಿನ ದಾಖಲೆ ಸರಿಯಾಗಿ ಇದ್ರೆ ಮಾತುಗಳು ಬಂದ್ ಆಗುತ್ತೆ. ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಎನ್ನೊಕೆ ಆಗಲ್ಲ. ಇದು ಯಾವ ದುಡ್ಡು ಎಂದು ಅವರನ್ನು ಕೇಳಲಾಗುತ್ತೆ. ಅವರು ಇದಕ್ಕೆ ನೀಡುವ ಉತ್ತರದ ಮೇಲೆ ಎಲ್ಲಾ ಇದೆ. ದಾಖಲೆಗಳು ಸರಿಯಾಗಿ ಇಲ್ಲ ಎಂದ್ರೆ ಅದು ಭ್ರಷ್ಟಾಚಾರ ಆಗುತ್ತೆ ಎಂದು ತಿಳಿಸಿದರು.