ಚೆನ್ನೈ: ಕಳ್ಳಭಟ್ಟಿ ಸಾರಾಯಿ ಸೇವಿಸಿ 68 ಜನ ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಿಂದ ವರದಿಯಾಗಿತ್ತು. ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮದಿಂದ ಆಗಿರುವ ದುರಂತವಾಗಿದೆ ಎಂದು ಬಿಜೆಪಿ ಮುಖಂಡ ಕೆ ಅಣ್ಣಾಮಲೈ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಅಕ್ರಮ ಮದ್ಯ ದುರಂತ ಪ್ರಕರಣವನ್ನು ಕೇಂದ್ರ ತನಿಖಾ ದಳದ ನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಡಿಎಂಕೆ ಸರ್ಕಾರ ಈ ಪ್ರಕರಣವನ್ನು ಈಗಾಗಲೇ ಸಿಐಡಿಯ ಕ್ರೈಂ ಬ್ರಾಂಚ್ ವಿಭಾಗಕ್ಕೆ ವರ್ಗಾಯಿಸಿತ್ತು. ಇನ್ನೂ ಸಿಬಿಐ ತನಿಖೆಗೆ ಈ ಪ್ರಕರಣದ ವರ್ಗಾವಣೆಯನ್ನು ವಿರೋಧಿಸಿತ್ತು. ಈ ಸಂಬಂಧ ಐಎಡಿಎಂಕೆ, ಪಿಎಂಕೆ ಮತ್ತು ಬಿಜೆಪಿ ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ಆಡಳಿತಾರೂಢ ಡಿಎಂಕೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.
ಪ್ರಕರಣ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಎಸ್ಪಿಯನ್ನು ಅಮಾನತು ಮಾಡಲಾಗಿದೆ. ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.
ಅರ್ಜಿದಾರರ ಪರ ವಕೀಲರು, ಈ ಹಿಂದೆ ಇದೇ ರೀತಿಯ ದುರಂತದಿಂದ ಸರ್ಕಾರವು ಯಾವುದೇ ಪಾಠವನ್ನು ಕಲಿತಿಲ್ಲ. ಪಕ್ಕದ ರಾಜ್ಯಗಳಿಂದ ಮೆಥೆನಾಲ್ ಬರುತ್ತಿದೆ. ಇದರಿಂದ ಪ್ರಕರಣವನ್ನು ಸಿಬಿಐಗೆ ನಿಭಾಯಿಸಲು ಸುಲಭವಾಗಲಿದೆ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸಿಬಿಐ ತನಿಖೆಗೆ ಸಮ್ಮತಿಸಿದೆ.