ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಮಹಾ ವಿಕಾಸ್ ಅಘಾಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ ಮತ್ತು ಒಕ್ಕೂಟವು ಸಾಮೂಹಿಕ ನಾಯಕತ್ವದಲ್ಲಿ ಸ್ಪರ್ಧಿಸಲಿದೆ ಎಂದು ಶರದ್ ಪವಾರ್ ಹೇಳಿದ್ದಾರೆ. ಸಿಎಂ ಮುಖ ಘೋಷಿಸುವಂತೆ ಉದ್ಧವ್ ಠಾಕ್ರೆ ಒತ್ತಾಯಿಸಿರುವ ನಡುವೆ ಈ ಮಹತ್ವದ ಹೇಳಿಕೆ ಹೊರಬಂದಿದೆ.
ಈ ಬಗ್ಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಯಾವ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದರ ಆಧಾರದ ಮೇಲೆ ಮುಖ್ಯಮಂತ್ರಿಯಾಗುತ್ತಾರೆ. ಸಿಎಂ ಮುಖವನ್ನು ಪ್ರಕಟಿಸದೇ ಚುನಾವಣೆ ಹೋಗುವುದು ಯಾವುದಕ್ಕೂ ಅಡ್ಡಿಯಾಗುವುದಿಲ್ಲ. ಒಕ್ಕೂಟ ಗೆಲುವು ಸಾಧಿಸಿದ ಬಳಿಕ ಯಾರು ನೇತೃತ್ವ ವಹಿಸಬೇಕು ಎಂಬುದು ಸಂಖ್ಯಾಬಲದ ಮೇಲೆ ನಿರ್ಧಾರವಾಗಬೇಕು ಎಂದರು.
ಇದಕ್ಕೆ ಪೂರಕವಾಗಿ ಉದಾಹರಣೆ ನೀಡಿದ ಅವರು, ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಅವರ ಹೆಸರು ಘೋಷಣೆಯಾಯಿತು. ಚುನಾವಣೆಯಲ್ಲಿ ಮತ ಕೇಳುವಾಗ ಅವರ ಹೆಸರನ್ನು ಎಲ್ಲೂ ಘೋಷಿಸಿರಲಿಲ್ಲ. ಹೀಗಾಗಿ ಈಗ ಸಿಎಂ ಮುಖಕ್ಕೆ ಬೇಡಿಕೆ ಇಡುವ ಅಗತ್ಯವಿಲ್ಲ. ಜನರ ಬೆಂಬಲ ಪಡೆದ ನಂತರ ನಾವು ಒಟ್ಟಾಗಿ ಕೂತು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದ ತಿಂಗಳು ನಡೆದ ಎಂವಿಎ ಸಭೆಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಎನ್ಸಿಪಿ ಅನುಮೋದಿಸಿದ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದರು. ಮುಖ್ಯಮಂತ್ರಿ ಹುದ್ದೆಗೆ ತಮ್ಮ ಆಯ್ಕೆಯನ್ನು ಘೋಷಿಸುವಂತೆ ನಾನು ಮೈತ್ರಿಕೂಟದ ಎಲ್ಲಾ ನಾಯಕರಿಗೆ ಮನವಿ ಮಾಡುತ್ತೇನೆ ಮತ್ತು ನಾನು ಅವರನ್ನು ಬೇಷರತ್ತಾಗಿ ಬೆಂಬಲಿಸುತ್ತೇನೆ ಎಂದು ಠಾಕ್ರೆ ಹೇಳಿದ್ದರು.