ಭುವನೇಶ್ವರ: ಒಡಿಶಾದ ಕಟಕ್ನಿಂದ 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜು ಜನತಾ ದಳದ (BJD) ಭರ್ತೃಹರಿ ಮಹತಾಬ್ (Bhartruhari Mahtab) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಹತಾಬ್ ಅವರು 1998, 1999, 2004, 2009, 2014 ಮತ್ತು 2019 ರಲ್ಲಿ ಒಡಿಶಾದ ಕಟಕ್ ಸಂಸದೀಯ ಕ್ಷೇತ್ರದಿಂದ ಸತತ ಆರು ಲೋಕಸಭಾ ಚುನಾವಣೆ ಗೆದ್ದಿದ್ದರು.
1998 ರ ಲೋಕಸಭಾ ಚುನಾವಣೆಯಲ್ಲಿ ಮಹತಾಬ್ ಅವರು ಕಾಂಗ್ರೆಸ್ ಪಕ್ಷದ ಸೈಯದ್ ಮುಸ್ತಾಫಿಜ್ ಅಹ್ಮದ್ ಅವರನ್ನು 1,12,694 ಮತಗಳ ಅಂತರದಿಂದ ಸೋಲಿಸುವ ಮೂಲಕ ಕಟಕ್ ಸ್ಥಾನವನ್ನು ಮೊದಲ ಬಾರಿಗೆ ಗೆದ್ದರು. ಬಳಿಕ 1999 ಮತ್ತು 2004 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಕನ್ಹು ಚರಣ್ ಲೆಂಕಾ ಮತ್ತು ಜಯಂತಿ ಪಟ್ನಾಯಕ್ ಅವರನ್ನು ಸೋಲಿಸುವ ಮೂಲಕವು ಗೆಲುವಿನ ನಗೆ ಬೀರಿದ್ದರು.
2009 ರ ಲೋಕಸಭಾ ಚುನಾವಣೆಯಲ್ಲಿ 2,36,292 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಿಭೂತಿ ಭೂಷಣ್ ಮಿಶ್ರಾ ಅವರನ್ನು ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಕಟಕ್ ಸ್ಥಾನವನ್ನು ಉಳಿಸಿಕೊಂಡರು. ಅಂತೆಯೇ 2014 ಹಾಗೂ 2019ರಲ್ಲಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದ ಸ್ಥಾನವನ್ನು ಅಲಂಕರಿಸಿದ್ದರು.
ಸದ್ಯ ಮಹತಾಬ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಬಿಜೆಡಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರಿಗೆ ಕಳುಹಿಸಿದ್ದಾರೆ. ಪಕ್ಷದಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಇಲ್ಲದ ಕಾರಣ ರಾಜೀನಾಮೆ ನೀಡಿರುವುದಾಗಿ ಮಹತಾಬ್ ತಿಳಿಸಿದ್ದಾರೆ.