ರಾಜ್ಯದ ಎರಡನೇ ದೊಡ್ಡ ಮಹಾನಗರ ಎಂಬ ಹೆಗ್ಗಳಿಕೆ ಜೊತೆಗೆ ವಾಣಿಜ್ಯ ನಗರಿ ಖ್ಯಾತಿಯ
ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ದೇಶದ ಪ್ರಮುಖ ಸ್ಥಳಗಳಿಗೆ ವಿಮಾನ ಸಂಚಾರ ಸೇವೆಯನ್ನು ಪುನಃ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಸಿಂಘಿ ಅವರು ಒತ್ತಾಯ ಮಾಡಿದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಈ ಮೊದಲಿದ್ದ ಇಂಡಿಗೋ ಸಂಸ್ಥೆಯ ಹುಬ್ಬಳ್ಳಿ- ಅಹಮದಾಬಾದ್, ಹುಬ್ಬಳ್ಳಿ-ಗೋವಾ, ಹುಬ್ಬಳ್ಳಿ-ಮುಂಬೈ, ಸ್ಟಾರ್ ಏರ್ ನ ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ-ಹಿಂಡನ್ (ದೆಹಲಿ) ಹಾಗೂ ಹುಬ್ಬಳ್ಳಿ-ತಿರುಪತಿ ಸಂಚಾರ ಸೇವೆ ಸ್ಥಗಿತಗೊಂಡಿದೆ. ಸ್ಟಾರ್ ಏರ್ನ ಬೆಳಗಾವಿ-ಅಹಮದಾಬಾದ್, ಬೆಳಗಾವಿ-ಜೋಧಪುರ ವಿಮಾನ ಸಂಚಾರ ತಾಂತ್ರಿಕ ಕಾರಣದಿಂದ ಕೊನೆಯ ಕ್ಷಣದಲ್ಲಿ ರದ್ದಾಗುತ್ತಿರುತ್ತವೆ. ಇದರಿಂದ ಈ ಭಾಗದ ಕೈಗಾರಿಕೋದ್ಯಮಿಗಳಿಗೆ, ವ್ಯಾಪಾರಿಗಳಿಗೆ ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿವೆ ಎಂದು ವಿವರಿಸಿದ್ದಾರೆ.
ಸೂರತ್-ಅಜೇರ್-ಕಿಶನಗಂಜ್ಗೆ ನೇರ ಸಂಪರ್ಕ ಕಲ್ಪಿಸುವ ಬೆಳಗಾವಿ- ಸೂರತ್ ವಿಮಾನ ಸಂಚಾರ ಸೇವೆ ಮುಂದಿನ ತಿಂಗಳು ರದ್ದಾಗಲಿದೆ. ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ನಗರಗಳು ಕೈಗಾರಿಕಾ ಮತ್ತು ವಾಣಿಜ್ಯ ಹಬ್ ಆಗಿವೆ. ಈ ಭಾಗದ ಆರ್ಥಿಕತೆ ಬೆಳವಣಿಗೆಗೆ ಹಾಗೂಉದ್ಯಮದ ಅಭಿವೃದ್ಧಿಗೆ ಸಮರ್ಪಕ ವಿಮಾನ ಸಂಚಾರ ಸೇವೆ ಅಗತ್ಯ. ಅನೇಕ ವಿಮಾನ ನಿಲ್ದಾಣಗಳು ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗಿಂತ ಹೆಚ್ಚು ವಿಮಾನ ಸಂಚಾರ ಸೇವೆಗಳು ಮುಖ್ಯ. ಮೊದಲಿದ್ದಂತೆ ವಿಮಾನ ಸಂಚಾರ ಸೇವೆಯನ್ನು ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.