ಬಾಲಿವುಡ್ ಬ್ಯೂಟಿ ನಟಿ ಜಾನ್ವಿ ಕಪೂರ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋಲುತ್ತಿವೆ. ಆದರೆ ಆಕೆ ಶ್ರೀದೇವಿ ಹಾಗೂ ಬೋನಿ ಕಪೂರ್ ಮಗಳು ಎಂಬ ಕಾರಣಕ್ಕೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ಇದೀಗ ಜಾನ್ವಿ ನಟನೆಯ ಮತ್ತೊಂದು ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿದೆ.
ಇತ್ತೀಚೆಗೆ ಜಾನ್ವಿ ಕಪೂರ್ ನಟನೆಯ ‘ಉಲಾಜ್’ ಸಿನಿಮಾ ರಿಲೀಸ್ ಆಗಿದೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಕಳಪೆ ಕಲೆಕ್ಷನ್ ಮಾಡಿದೆ. ಸುಧಾಂಶು ಸರಿಯಾ ನಿರ್ದೇಶಕದ ‘ಉಲಾಜ್’ ಚಿತ್ರ ದೇಶಾದ್ಯಂತ ಮೊದಲ ದಿನ (ಆಗಸ್ಟ್ 2) 1 ಕೋಟಿ ರೂಪಾಯಿ, ಎರಡನೇ ದಿನ 1.75 ಕೋಟಿ ರೂಪಾಯಿ ಹಾಗೂ ಭಾನುವಾರ (ಆಗಸ್ಟ್ 4) 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 4.75 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಸಿನಿಮಾ 5 ಕೋಟಿ ಕೂಡ ಕಲೆಕ್ಷನ್ ಮಾಡಲು ಸಾಧ್ಯವಾಗಿಲ್ಲ.
2018ರಲ್ಲಿ ರಿಲೀಸ್ ಆದ ‘ಧಡಕ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ಮೆಚ್ಚುಗೆ ಪಡೆಯಿತು. ಜಾನ್ವಿ ಕಪೂರ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಯಿತು. ಆ ಬಳಿಕ ‘ರೂಹಿ’, ‘ಗುಡ್ ಲಕ್ ಜೆರ್ರಿ’, ‘ಮಿಲಿ’, ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾಗಳು ಬಿಡುಗಡೆ ಕಂಡು ಫ್ಲಾಪ್ ಎನಿಸಿಕೊಂಡಿದೆ.
ಸದ್ಯ ಜಾನ್ವಿ ಕಪೂರ್ ಅವರು ದಕ್ಷಿಣದಲ್ಲಿ ಬ್ಯುಸಿ ಆಗಿದ್ದಾರೆ. ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಚಿತ್ರಕ್ಕೆ ಅವರೇ ನಾಯಕಿ. ಅದೇ ರೀತಿ ಜಾನ್ವಿ ಕಪೂರ್ ಅವರು ರಾಮ್ ಚರಣ್ ನಟನೆಯ ಮುಂದಿನ ಚಿತ್ರಕ್ಕೆ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಸದ್ಯ ಜಾನ್ವಿ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದು ಅಲ್ಲಿಯಾದರೂ ಒಂದೊಳ್ಳೆ ಸಕ್ಸಸ್ ಸಿಗುತ್ತಾ ಎಂದು ಎದುರು ನೋಡ್ತಿದ್ದಾರೆ.