ಬೆಂಗಳೂರು: 30 ದಿನದಲ್ಲಿ ಇ ಖಾತಾ ಮಂಜೂರು ಆಗುವ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಬೆಂಗಳೂರಿನ ಹೈಕೋರ್ಟ್ ಸೂಚನೆ ನೀಡಿದೆ. ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಇ- ಗೌರ್ನೆನ್ಸ್ ಇಲಾಖೆಗೆ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ. ಅಲ್ಲದೇ ಪ್ರತಿ ಗ್ರಾಪಂ ವ್ಯಾಪ್ತಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವೆಬ್ಸೈಟ್ನಲ್ಲಿ ಅರ್ಜಿಗಳ ಸ್ವೀಕಾರ, ಪರಿಶೀಲನೆ ಮತ್ತು ವಿಲೇವಾರಿ ಮಾಡುವ ಸಂಬಂಧ ಸೂಕ್ತ ವ್ಯವಸ್ಥೆ ಜಾರಿಯಾಗುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಅಲ್ಲದೆ, ಇ-ಖಾತಾ ಪಡೆದುಕೊಳ್ಳುವುದಕ್ಕಾಗಿ ಅರ್ಜಿದಾರರ ಹೆಸರು, ಅರ್ಜಿ ಸಲ್ಲಿಸಿರುವ ಆಸ್ತಿಯ ಸಂಪೂರ್ಣ ವಿವರ, ಖಾತೆಗಾಗಿ ಕೋರಿ ಸಲ್ಲಿಸಿರುವ ಅರ್ಜಿಯ ದಿನಾಂಕ, ಇ-ಖಾತೆಯನ್ನು ವಿತರಣೆ ಮಾಡಿದ ದಿನಾಂಕವು ಕಡ್ಡಾಯವಾಗಿ ಪ್ರಸ್ತಾಪವಾಗಿರಬೇಕು ಎಂದು ಸೂಚನೆ ನೀಡಿದೆ. ಇ -ಖಾತೆಗಾಗಿ ಇ-ಸುಗಮಾ ನಿಯಮಗಳ ಪ್ರಕಾರ ಯಾವುದೇ ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ ಮೂವತ್ತು ದಿನಗಳ ಒಳಗಾಗಿ ಇತ್ಯರ್ಥ ಪಡಿಸಿಕೊಳ್ಳಬೇಕು. ಒಂದು ವೇಳೆ ಮೂವತ್ತು ದಿನಗಳಿಗೂ ಹೆಚ್ಚು ವಿಳಂಬವಾಗಿದ್ದಲ್ಲಿ ಅದಕ್ಕೆ ಸೂಕ್ತ ಕಾರಣವನ್ನು ವೆಬ್ಸೈಟ್ ಮೂಲಕ ತಿಳಿಸುವಂತಾಗಬೇಕು ಎಂದು ಪೀಠ ತಿಳಿಸಿದೆ.