ಹಾಲು ಅಥವಾ ಹಾಲಿನ ಯಾವುದೇ ಉತ್ಪನ್ನಗಳನ್ನು ಬಳಸದೇ ಐಸ್ಕ್ರೀಮ್ ಮಾಡಬಹುದು ಎಂದರೆ ನೀವು ನಂಬುತ್ತೀರಾ? ಇಲ್ಲ ಎಂದರೆ ನಾವಿಂದು ಹೇಳಿಕೊಡುತ್ತಿರೋ ಐಸ್ಕ್ರೀಮ್ ರೆಸಿಪಿಯನ್ನೊಮ್ಮೆ ನೀವು ಟ್ರೈ ಮಾಡ್ಲೇಬೇಕು. ಈ ಐಸ್ಕ್ರೀಮ್ ಅನ್ನು ಕೇವಲ ಮೂರೇ ಮೂರು ಪದಾರ್ಥಗಳನ್ನು ಬಳಸಿ ಮಾಡಬಹುದು. ಮಾತ್ರವಲ್ಲದೇ ಇದು ಆರೋಗ್ಯಕ್ಕೂ ಉತ್ತಮವಾಗಿದೆ. ಅತ್ಯಂತ ಸರಳವಾಗಿರೋ ಈ ಐಸ್ಕ್ರೀಮ್ ವಿಧಾನವನ್ನು ನೀವೊಮ್ಮೆ ಟ್ರೈ ಮಾಡಿ ನೋಡಿ. ಮತ್ತೆ ಮನಬಂದಾಗೆಲ್ಲಾ ಖಂಡಿತಾ ಇದನ್ನು ಮಾಡಿ ಸವಿಯುತ್ತೀರಿ.
ಬೇಕಾಗುವ ಪದಾರ್ಥಗಳು:
ಬಾಳೆಹಣ್ಣು – 3
ಕೋಕೋ ಪೌಡರ್ – 2 ಟೀಸ್ಪೂಮ್
ಪೀನಟ್ ಬಟರ್ – 1 ಟೀಸ್ಪೂನ್
ಮಾಡುವ ವಿಧಾನ:
* ಮೊದಲಿಗೆ ಬಾಳೆಹಣ್ಣುಗಳನ್ನು ಕತ್ತರಿಸಿ, 30 ನಿಮಿಷಗಳವರೆಗೆ ಫ್ರೀಜರ್ನಲ್ಲಿ ಇಟ್ಟುಬಿಡಿ.
* ಈಗ ಬ್ಲೆಂಡರ್ ತೆಗೆದುಕೊಂಡು, ಬಾಳೆಹಣ್ಣುಗಳನ್ನು ಅದರಲ್ಲಿ ಹಾಕಿ ಸುಮಾರು 5 ನಿಮಿಷಗಳ ಕಾಲ ಚೆನ್ನಾಗಿ ರುಬ್ಬಿಕೊಳ್ಳಬೇಕು. (ನೀರು ಬಳಸಬಾರದು)
* ರುಬ್ಬಿಕೊಳ್ಳುವ ಸಮಯ ನೀವು ಆಗಾಗ ಬ್ಲೆಂಡರ್ ಅನ್ನು ನಿಲ್ಲಿಸಿ, ಬದಿಗೆ ಸರಿದಿರುವ ಪೇಸ್ಟ್ ಅನ್ನು ಮಧ್ಯಕ್ಕೆ ತಂದು ಮತ್ತೆ ರುಬ್ಬಿಕೊಳ್ಳಿ. ಇದರಿಂದ ಎಲ್ಲಿಯೂ ಗಂಟುಗಳು ಉಳಿಯುವುದಿಲ್ಲ.
* ಈಗ ಬಾಳೆಹಣ್ಣಿನ ಪೇಸ್ಟ್ಗೆ ಕೋಕೋ ಪೌಡರ್ ಹಾಗೂ ಪೀನಟ್ ಬಟರ್ ಸೇರಿಸಿ ಮತ್ತೆ ಸುಮಾರು 3 ನಿಮಿಷಗಳ ವರೆಗೆ ಬ್ಲೆಂಡ್ ಮಾಡಿಕೊಳ್ಳಿ.
* ಈಗ ಈ ಮಿಶ್ರಣವನ್ನು ಒಂದು ಗಟ್ಟಿ ಮುಚ್ಚಳದ ಪಾತ್ರೆಗೆ ಹಾಕಿ, ಫ್ರೀಜರ್ನಲ್ಲಿ ಸುಮಾರು 4-5 ಗಂಟೆಗಳ ಕಾಲ ಇಡಿ.
* ಡೈರಿ ಫ್ರೀ ಬಾಳೆಹಣ್ಣಿನ ಐಸ್ಕ್ರೀಮ್ ಗಟ್ಟಿಯಾದ ಬಳಿಕ ತಮಗೆ ಬೇಕಾದಲ್ಲಿ ಅದರ ಮೇಲೆ ಬಾದಾಮಿ ಹಾಗೂ ಪಿಸ್ತವನ್ನು ಅಲಂಕರಿಸಿ ಸವಿಯಲು ಸಿದ್ಧವಾಗುತ್ತದೆ.