ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ (BJP) ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ (A.B.Malaka Reddy) ಬಿಜೆಪಿ ತೊರೆದು ಕಾಂಗ್ರೆಸ್ (Congress) ಸೇರ್ಪಡೆಗೊಳ್ಳುವುದು ಬಹುತೇಕ ಖಚಿತವಾಗಿದೆ.
ಇಂದು ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿರುವ ಅವರು, ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K.Shivakumar) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಮಾಲಕರೆಡ್ಡಿ ಐದು ಬಾರಿ ಶಾಸಕರಾಗಿ, ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣೆ ವೇಳೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿದರು. ಬಾಬುರಾವ್ ಚಿಂಚನಸೂರ್ ಜೊತೆ ಬಿಜೆಪಿ ಸೇರಿದ್ದ ಮಾಲಕರೆಡ್ಡಿ ಜಿದ್ದಿಗೆ ಬಿದ್ದು ಖರ್ಗೆಯವರನ್ನು ಸೋಲಿಸಿದರು. ಆದರೆ ಕಳೆದ ವಾರ ಬಾಬುರಾವ್ ಚಿಂಚನಸೂರ್ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಮಾಲಕರೆಡ್ಡಿ ಕೂಡಾ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.
ಮಾಲಕರೆಡ್ಡಿ ಬಿಜೆಪಿಯಲ್ಲಿದ್ದರೂ ತಮ್ಮ ಪುತ್ರಿ ಅನುರಾಗಾ ಮಾಲಕರೆಡ್ಡಿ (Anuraga Malaka Reddy) ಕಾಂಗ್ರೆಸ್ನಲ್ಲಿಯೇ ಉಳಿದಿದ್ದರು. ಹೀಗಾಗಿ ಅನುರಾಗಾ ಮಾಲಕರೆಡ್ಡಿಯವರ ಮೂಲಕ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಿಸಿದರು. ಮಗಳಿಗೆ ಈ ಬಾರಿ ಶತಾಯಗತಾಯ ಕಾಂಗ್ರೆಸ್ ಟಿಕೆಟ್ ಕೊಡಿಸಬೇಕೆಂದುಕೊಂಡಿದ್ದ ಮಾಲಕರೆಡ್ಡಿ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಹಿಂದೇಟು ಹಾಕಿದ್ದರಿಂದ ವಿಳಂಬವಾಗಿತ್ತು. ಕೊನೆಗೂ ಶುಕ್ರವಾರ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಲಕರೆಡ್ಡಿ ಭೇಟಿಯಾಗಿ ಮತ್ತೆ ಪಕ್ಷಕ್ಕೆ ವಾಪಸ್ ಬರುವ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಸೇರುವಂತೆ ಪಕ್ಷ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ ಬಿಜೆಪಿಗೆ ರಾಜೀನಾಮೆ ನೀಡಲು ಮಾಲಕರೆಡ್ಡಿ ಮುಂದಾಗಿದ್ದಾರೆ.
ಮಾಲಕರೆಡ್ಡಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ. ಕಾಂಗ್ರೆಸ್ನಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಲಕರೆಡ್ಡಿ, ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ರೂವಾರಿಗಳಲ್ಲಿ ಮಾಲಕರೆಡ್ಡಿ ಕೂಡ ಒಬ್ಬರು. ಆದರೆ ಈಗ ಹಳೇಯ ದ್ವೇಷ ಮರೆತು ಮತ್ತೆ ಘರ್ ವಾಪಸಿ ಆಗಲು ಮಾಲಕರೆಡ್ಡಿ ಮುಂದಾಗಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ತಮ್ಮದೇ ಹಿಡಿತ ಹೊಂದಿರುವ ಎಬಿ ಮಾಲಕರೆಡ್ಡಿ ಹಾಗೂ ಬಾಬುರಾವ್ ಚಿಂಚನಸೂರ್ ಬಿಜೆಪಿ ಸೇರಿದ ಮೇಲೆ ಬಿಜೆಪಿಗೆ ಒಂದಷ್ಟು ಆನೆ ಬಲ ಬಂದಂತಾಗಿತ್ತು. ಪ್ರಮುಖವಾಗಿ ಯಾದಗಿರಿ (Yadgiri) ಹಾಗೂ ಕಲಬುರಗಿ (Kalaburagi) ಜಿಲ್ಲೆಗಳಲ್ಲಿ ಸೋಲಿನ ಭೀತಿಯಲ್ಲಿದ್ದ ಒಂದಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದರು. ಆದರೆ ಈಗ ಇಬ್ಬರೂ ನಾಯಕರು ಕಮಲಕ್ಕೆ ಕೈ ಕೊಟ್ಟು, ಘರ್ ವಾಪಸಿ ಆಗಿರುವುದರಿಂದ ಕಮಲ ಪಡೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿನ್ನಡೆಯಾದಂತಾಗಿದೆ.