ಕೆಲ ಸಮಯಗಳ ಕಾಲ ಅಸಮಾಧಾನಗೊಂಡಿದ್ದ ಭಾರತ ಹಾಗೂ ಮಾಲ್ಡೀವ್ಸ್ ಇದೀಗ ಒಂದಾಗಿದೆ. ಇದನ್ನೇ ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದ ಚೀನಾಕ್ಕೆ ಹಿನ್ನಡೆಯಾಗಿದೆ. ದ್ವೀಪಗಳ ರಾಷ್ಟ್ರ ಮಾಲ್ಡೀವ್ಸ್ ತನ್ನ 28 ದ್ವೀಪಗಳ ಅಭಿವೃದ್ಧಿ ಕಾರ್ಯವನ್ನು ಭಾರತಕ್ಕೆ ವಹಿಸಿ ಕೊಡಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ.
ಇದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭೇಟಿಯ ಫಲವಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಮಾಲ್ಡೀವ್ಸ್ ಗೊಂದಲಕ್ಕೆ ಬಿದ್ದು ತಪ್ಪು ಮಾಡಿತ್ತು. ಅಲ್ಲಿನ ರಾಜಕಾರಣಿಗಳು ಭಾರತ ವಿರೋಧಿ ಹೇಳಿಕೆ ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾದರು. ಹೀಗಾಗಿ ಅಲ್ಲಿಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಯಿತು. ಹೀಗಾಗಿ ಆ ದೇಶಕ್ಕೆ ಚೀನಾದ ನೆರವು ಅಗತ್ಯವಾಯಿತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ದ್ವೀಪ ರಾಷ್ಟ್ರವು ತನ್ನ ಭಾರತದೊಂದಿಗೆ ಶಾಂತಿ ಸ್ಥಾಪಿಸಲು ಸಿದ್ಧವಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಭಾನುವಾರ ಮಾಲ್ಡೀವ್ಸ್ ಭೇಟಿ ಮುಕ್ತಾಯಗೊಳಿಸಿದ್ದರು. ರಾಜಧಾನಿ ಮಾಲೆಯಲ್ಲಿದ್ದಾಗ ಜೈಶಂಕರ್ ಹಲವಾರು ಒಡಂಬಡಿಕೆಗಳಿಗೆ ಸಹಿ ಹಾಕಿದ್ದರು. ಅಧಿಕ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದರು. ಭಾರತದಲ್ಲಿ ಹೆಚ್ಚುವರಿ 1,000 ಮಾಲ್ಡೀವ್ಸ್ ನಾಗರಿಕ ಸೇವಕರ ಸಾಮರ್ಥ್ಯ ವರ್ಧನೆ ಮತ್ತು ಮಾಲ್ಡೀವ್ಸ್ ನಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪರಿಚಯಿಸುವ ಒಪ್ಪಂದಗಳು ನಡೆಯಿತು.
ಮಾಲ್ಡೀವ್ಸ್ 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ವ್ಯವಸ್ಥೇ ಭಾರತದ ಲೈನ್ ಆಫ್ ಕ್ರೆಡಿಟ್ (ಎಲ್ಒಸಿ) ನೆರವಿನ ಯೋಜನೆಯನ್ನು ಅಧ್ಯಕ್ಷ ಮುಯಿಝು ಅವರ ಸಮ್ಮುಖದಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಮತ್ತು ವಿದೇಶಾಂಗ ಸಚಿವರು ಜಂಟಿಯಾಗಿ ಉದ್ಘಾಟಿಸಿದರು. ಮುಯಿಝು ಈಗ 28 ದ್ವೀಪಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಭಾರತಕ್ಕೆ ಅನುಮತಿ ನೀಡಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು ಅವರು ಭಾರತದ ನಿರಂತರ ಅಭಿವೃದ್ಧಿ ನೆರವನ್ನು ಶ್ಲಾಘಿಸಿದ್ದಾರೆ. ಭಾರತ-ಮಾಲ್ಡೀವ್ಸ್ ಸಂಬಂಧವನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆ ಪುನರುಚ್ಚರಿಸಿದ್ದಾರೆ.