ಕೋಯಿಕ್ಕೋಡ್: ಮಹಿಳಾ ವೈದ್ಯರ ಮೇಲೆ ಮೂರು ತಿಂಗಳಿನಿಂದ ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ 24 ವರ್ಷದ ಪುರುಷ ನರ್ಸ್ನನ್ನು ಕೇರಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಕರ್ನಾಟಕದ ಆಸ್ಪತ್ರೆಯೊಂದರಲ್ಲಿ ವೈದ್ಯೆ ಮತ್ತು ನರ್ಸ್ ಇಬ್ಬರೂ ಕೆಲಸ ಮಾಡುತ್ತಿದ್ದಾಗ ಅತ್ಯಾಚಾರದ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯೆ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ.
ಕೊಯಮತ್ತೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ಕೊಡಿಸಲು ವ್ಯವಸ್ಥೆ ಮಾಡುವುದಾಗಿ ಸುಳ್ಳು ಭರವಸೆ ನೀಡಿ 28 ವರ್ಷದ ವೈದ್ಯೆ ಮೇಲೆ 24 ವರ್ಷದ ನಿಶಾಮ್ ಬಾಬು ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯು ತ್ರಿಶ್ಶೂರು ಜಿಲ್ಲೆಯವನಾಗಿದ್ದಾನೆ.
ಅವರಿಬ್ಬರೂ ಮೊದಲು ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಮೊದಲ ಬಾರಿಗೆ ಆಕೆ ಮೇಲೆ ನಿಶಾಮ್ ಬಾಬು ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಆಕೆಯನ್ನು ಕೋಯಿಕ್ಕೋಡ್ಗೆ ಕರೆದುಕೊಂಡು ಬಂದಿದ್ದ. ಅಲ್ಲಿಯೂ ಲಾಡ್ಜ್ನಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ವೈದ್ಯೆಯ ಬೆತ್ತಲೆ ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿ, ಜನವರಿ ಮತ್ತು ಫೆಬ್ರವರಿಯಲ್ಲಿ ಮೈಸೂರಿನ ಅನೇಕ ಲಾಡ್ಜ್ಗಳಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆತನ ಕಿರುಕುಳ ಸಹಿಸಲಾಗದೆ ವೈದ್ಯೆ, ತನ್ನ ಮೊಬೈಲ್ ಫೋನ್ನಲ್ಲಿ ಆಕೆಯ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಇದಾದ ನಂತರ ಆತ ನಗ್ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆ ಮಾಡಿದ್ದ. ಇದರಿಂದ ಆಘಾತಕ್ಕೆ ಒಳಗಾದ ವೈದ್ಯೆ ದೂರು ನೀಡಿದ್ದಾರೆ.
ಆರೋಪಿ ಬಾಬು ವಿರುದ್ಧ ಕೋಯಿಕ್ಕೋಡ್ ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 67 ಎ (ಲೈಂಗಿಕ ದೌರ್ಜನ್ಯದ ಕೃತ್ಯದ ಅಂಶಗಳನ್ನು ವಿದ್ಯುನ್ಮಾನ ಮಾದರಿಯಲ್ಲಿ ಪ್ರಕಟಿಸಿದ ಅಥವಾ ವಿತರಿಸಿದ ಅಪರಾಧಕ್ಕೆ ಶಿಕ್ಷೆ) ಅಡಿ ಪ್ರಕರಣ ದಾಖಲಿಸಿದ್ದರು. ಆರೋಪಿಯನ್ನು ಕೂಡಲೇ ಪತ್ತೆ ಮಾಡಿದ ಪೊಲೀಸರು, ಆತನನ್ನು ಬಂಧಿಸಿದ್ದಾರೆ.