ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿರ್ಮಾಣಗೊಂಡಿರುವ ಮಹಾತ್ಮಾ ಗಾಂಧೀಜಿ ಕಂಚಿನ ಪ್ರತಿಮೆ ಅನಾವರಣಗೊಳಿಸಲಾಯಿತು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಮೆ ಲೋಕಾರ್ಪಣೆಗೊಳಿಸಿದರು. ಚರಕವನ್ನು ತಿರುಗಿಸುವ ಮೂಲಕ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಮೆ ಅನಾವರಣಗೊಳ್ಳುತ್ತಿದ್ದಂತೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು. ಇದೇ ವೇಳೆ ಗದಗನ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ಯ ವಿಶ್ವ ವಿದ್ಯಾಲಯಕ್ಕೆ ಮರು ನಾಮಕರಣ ಮಾಡಲಾಗಿದ್ದು, ಮಹಾತ್ಮಾ ಗಾಂಧೀಜಿ ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡಲಾಗಿದ್ದು, ವಿಶ್ವವಿದ್ಯಾಲಯದ ಲಾಂಚ ಬಿಡುಗಡೆ ಮಾಡಲಾಯಿತು.
ಇದೇ ವೇದಿಕೆಯಲ್ಲೇ ಮಹಾತ್ಮಾ ಗಾಂಧಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಪ್ರಯುಕ್ತ ಗಾಂಧಿ ಭಾರತ ಅಂಚೆ ಲಕೋಟೆ ಮತ್ತು ಗಾಂಧಿ ಭಾರತ ಮರು ನಿರ್ಮಾಣ ಹೊತ್ತಿಗೆ ಬಿಡುಗಡೆ ಮಾಡಿದರು. ಇನ್ನೂ ಕಾರ್ಯಕ್ರಮಕ್ಕೂ ಮುನ್ನ ಸುವರ್ಣಸೌಧದಲ್ಲಿ ಸರ್ಕಾರದ ವತಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಸನ್ಮಾನ ಮಾಡಲಾಯ್ತು.
ಸುವರ್ಣ ವಿಧಾನಸೌಧದಲ್ಲಿ ಸುಮಾರು 20 ಟನ್ ಕಂಚಿನ ಮೂರ್ತಿ ನಿರ್ಮಾಣ ಮಾಡಲಾಗಿದೆ. ಅಯೋಧ್ಯೆ ರಾಮ ಮಂದಿರದ ರಾಮಲಲ್ಲಾ ಮೂರ್ತಿ ನಿರ್ಮಿಸಿದ ಮೂರ್ತಿಕಾರನಿಂದಲೇ ಗಾಂಧಿ ಮೂರ್ತಿ ನಿರ್ಮಾಣ ಮಾಡಿದ್ದು, ನೆಲ ಮಹಡಿಯಿಂದ 37 ಅಡಿ ಎತ್ತರದ ಮೂರ್ತಿ ಇದಾಗಿದ್ದು, 8 ಕೋಟಿ ಅನುದಾನದಲ್ಲಿ ಮೂರ್ತಿ ನಿರ್ಮಾಣ ಮಾಡಲಾಗಿದೆ.